ಆರ್‌ಎಸ್‌ಎಸ್ ಕಚೇರಿಗೆ ಕಾಲಿಡುವುದಕ್ಕಿಂತ ಶಿರಚ್ಛೇದಕ್ಕೊಳಗಾಗುವುದೇ ಲೇಸು: ರಾಹುಲ್ ಗಾಂಧಿ
ಹೋಶಿಯಾರ್ಪುರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಸಂಘ ಪರಿವಾರ ನೇತೃತ್ವದ ಕೇಸರಿ ಪಡೆಗೆ ಕಟುವಾದ ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕಣ್ಣಾರೆ ನೋಡುವಂತೆ ಯಾರನ್ನೂ ಒತ್ತಾಯಿಸಲ್ಲ, ಆರ್ ಎಸ್ ಎಸ್ ಕಚೇರಿಗೆ ಕಾಲಿಡುವುದಕ್ಕಿಂತಲೂ ಶಿರಚ್ಚೇದಕ್ಕೆ ಆದ್ಯತೆ ನೀಡುವುದಾಗಿ ಸ್ಪಷ್ಟಪಡಿಸಿದರು.
ಪಂಜಾಬ್ ನ ಹೋಶಿಯಾರ್ಪುರ್ ನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡ ಹಾಗೂ ಅವರ ಸೋದರ ಸಂಬಂಧಿ ವರುಣ್ ಗಾಂಧಿ ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳ ನಡುವೆ ರಾಹುಲ್ ಆರ್ ಎಸ್ ಎಸ್ ಸಿದ್ಧಾಂತಗಳ ಜೊತೆಗಿನ ಸಂಘರ್ಷದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಎಂದಿಗೂ ಆರ್ ಎಸ್ ಎಸ್ ಸಿದ್ದಾಂತ ಒಪ್ಪಿಕೊಳ್ಳಲ್ಲ ಎಂದಿದ್ದಾರೆ.
ವರುಣ್ ಒಂದು ಹಂತದಲ್ಲಿ ಆರ್ ಎಸ್ ಎಸ್ ಸಿದ್ದಾಂತ ಒಪ್ಪಿಕೊಂಡಿದ್ದಾನೆ. ಆದರೆ, ಅದನ್ನು ಎಂದಿಗೂ ನಾನು ಒಪ್ಪಿಕೊಳ್ಳುವುದಿಲ್ಲ, ಆರ್ ಎಸ್ ಎಸ್ ಕಚೇರಿಗೆ ಕಾಲಿಟ್ಟರೆ ಶಿರಚ್ಛೇದ ಮಾಡಿಕೊಳ್ಳುವುದಾಗಿ ಅವರು ತಿಳಿಸಿದರು.
ಬಿಜೆಪಿಯಲ್ಲಿರುವ ವರುಣ್ ಗಾಂಧಿ ಒಂದು ವೇಳೆ ಹೊರಗೆ ಬಂದರೆ ಆತನಿಗೆ ತೊಂದರೆಯಾಗಬಹುದು. ನನ್ನ ಸಿದ್ದಾಂತ ಆತನ ಸಿದ್ದಾಂತದೊಂದಿಗೆ ಹೊಂದಾಣಿಕೆ ಆಗಲ್ಲ. ಆರ್ ಎಸ್ ಎಸ್ ಕಚೇರಿಗೆ ನಾನು ಎಂದಿಗೂ ಹೋಗಲ್ಲ. ನನ್ನ ಕುಟುಂಬದ ಸಿದ್ದಾಂತವಿದೆ. ಆರ್ ಎಸ್ ಎಸ್ ಕಚೇರಿ ಕಾಲಿಡುವ ಮುನ್ನ ಶಿರಚ್ಛೇದ ಮಾಡಿಕೊಳ್ಳುವುದಾಗಿ ರಾಹುಲ್ ಗಾಂಧಿ ಹೇಳಿದರು.
ವರುಣ್ ಗಾಂಧಿಯನ್ನು ಖಂಡಿತವಾಗಿಯೂ ಭೇಟಿಯಾಗುತ್ತೇನೆ. ಆತನನ್ನು ತಬ್ಬಿಕೊಳ್ಳುತ್ತೇನೆ. ಆದರೆ, ಆ ಸಿದ್ದಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ಸಮಸ್ಯೆಗಳಿಂದ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ