ರಾಜ್ಯಪಾಲ ಹುದ್ದೆಯಿಂದ ಕೆಳಗಿಳಿಯುವ ಇಚ್ಛೆ ವ್ಯಕ್ತಪಡಿಸಿದ ಭಗತ್ ಸಿಂಗ್ ಕೋಶ್ಯಾರಿ!

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಶೀಘ್ರದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.
ಭಗತ್ ಸಿಂಗ್ ಕೋಶ್ಯಾರಿ
ಭಗತ್ ಸಿಂಗ್ ಕೋಶ್ಯಾರಿ

ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಶೀಘ್ರದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ. 

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಲಾಗಿದೆ. ಮುಂದಿನ ಬದುಕನ್ನು ಓದು ಬರಹದಲ್ಲಿಯೇ ಕಳೆಯಬೇಕು ಎಂದು ಇಚ್ಛಿಸಿದ್ದು ಎಲ್ಲಾ ರೀತಿಯ ರಾಜಕೀಯ ಜವಾಬ್ದಾರಿಗಳಿಂದ ಸ್ವಾತಂತ್ರ್ಯವನ್ನು ಬಯಸುತ್ತಿರುವುದಾಗಿ ಹೇಳಿದ್ದಾರೆ.

ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ಅತ್ಯಂತ ಗೌರವದ ಸಂಗತಿ. ಸಂತರು ಮತ್ತು ಸಮಾಜ ಸೇವಕರ ನಾಡು ಈ ಮಹಾರಾಷ್ಟ್ರ. ಕಳೆದ ಮೂರು ವರ್ಷಗಳಲ್ಲಿ ಮಹಾರಾಷ್ಟ್ರದ ಜನರಿಂದ ನಾನು ಪಡೆದ ಪ್ರೀತಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಆಶಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಕೋಶ್ಯಾರಿ ತಿಳಿಸಿದ್ದಾರೆ. ಪ್ರಧಾನಿ ಮೋದಿಯವರು ಮುಂಬೈ ಪ್ರವಾಸಕ್ಕೆ ಬಂದಾಗ ರಾಜಕೀಯ ಹೊಣೆಗಾರಿಕೆಯಿಂದ ಮುಕ್ತರಾಗಬೇಕೆಂದು ಸ್ಪಷ್ಟವಾಗಿ ಹೇಳಲಾಗಿತ್ತು ಎಂದರು.

ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಈ ರೀತಿ ರಾಜೀನಾಮೆ ನೀಡುವ ಕುರಿತು ಮಾತನಾಡಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ನಡೆಯುತ್ತಿರುವ ರೀತಿಯಲ್ಲಿ, ವಿವಾದಗಳೊಂದಿಗೆ ಭಗತ್ ಸಿಂಗ್ ಕೊಶ್ಯಾರಿ ಅವರ ಸಂಪರ್ಕವು ಗಟ್ಟಿಯಾಗುತ್ತಿದೆ. ಸಾವಿತ್ರಿ ಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದಿಂದ ಈ ವಿವಾದಗಳು ಪ್ರಾರಂಭವಾಗಿದ್ದವು.

ಆ ಕಾರ್ಯಕ್ರಮದಲ್ಲಿ ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಬಾಲ್ಯ ವಿವಾಹದ ಕುರಿತು ಕೊಶ್ಯಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ನಂತರ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಇದಲ್ಲದೇ ಗುಜರಾತಿ ಮತ್ತು ಮರಾಠಿ ಸಮುದಾಯದ ಬಗ್ಗೆಯೂ ವಿಚಿತ್ರ ಹೇಳಿಕೆಗಳನ್ನು ಕೊಟ್ಟಿದ್ದರು.

ಈ ಎಲ್ಲಾ ಹೇಳಿಕೆಗಳಿಂದಾಗಿ, ಉದ್ಧವ್ ಠಾಕ್ರೆ ಮತ್ತು ಇತರ ವಿರೋಧ ಪಕ್ಷಗಳು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ರಾಜೀನಾಮೆಯನ್ನು ನಿರಂತರವಾಗಿ ಬಯಸಿದ್ದವು. ಬಿಜೆಪಿ ಕಡೆಯಿಂದ ಈ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳಿಲ್ಲ, ಆದರೆ ಮೈದಾನದಲ್ಲಿ ಸವಾಲು ಹೆಚ್ಚುತ್ತಿದೆ. ಇದೀಗ ಆ ಸವಾಲಿನ ನಡುವೆಯೇ ಭಗತ್ ಸಿಂಗ್ ಕೋಶ್ಯಾರಿ ಅವರೇ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ್ದಾರೆ. ಈಗ ಈ ಬಗ್ಗೆ ಸರ್ಕಾರ ಯಾವ ನಿಲುವು ತಳೆಯುತ್ತದೆ. ಶಿಂಧೆ ಸರ್ಕಾರ ಏನು ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಮುಂದೆ ತಿಳಿಯಲಿದೆ. ಇಂತಹ ಹೇಳಿಕೆಗಳ ಹೊರತಾಗಿ, ಭಗತ್ ಸಿಂಗ್ ಕೋಶ್ಯಾರಿಯವರ ಕೆಲವು ನಿರ್ಧಾರಗಳು ರಾಜಕೀಯ ಕ್ರಾಂತಿಯನ್ನು ತರಲು ಸಹ ಕೆಲಸ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com