ಲಾಲ್ ಚೌಕ್ ನಲ್ಲಿ ರಾಹುಲ್ ತಿರಂಗಾ ಹಾರಿಸಿದ್ದು ಮೋದಿಯಿಂದ: ಬಿಜೆಪಿ
ಶ್ರೀನಗರದ ಲಾಲ್ ಚೌಕ್ ನಲ್ಲಿ ಭಾರತದ ಯಾವುದೇ ವ್ಯಕ್ತಿ ಹೆಮ್ಮೆಯಿಂದ ರಾಷ್ಟ್ರಧ್ವಜಾರೋಹಣ ಮಾಡಬಹುದಾದ ವಾತಾವರಣವನ್ನು ಪ್ರಧಾನಿ ಮೋದಿ ಸೃಷ್ಟಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.
Published: 29th January 2023 09:27 PM | Last Updated: 29th January 2023 09:28 PM | A+A A-

ಲಾಲ್ ಚೌಕ್ ನಲ್ಲಿ ತಿರಂಗಾ ಹಾರಿಸಿದ ರಾಹುಲ್ ಗಾಂಧಿ
ಶ್ರೀನಗರ: ಶ್ರೀನಗರದ ಲಾಲ್ ಚೌಕ್ ನಲ್ಲಿ ಭಾರತದ ಯಾವುದೇ ವ್ಯಕ್ತಿ ಹೆಮ್ಮೆಯಿಂದ ರಾಷ್ಟ್ರಧ್ವಜಾರೋಹಣ ಮಾಡಬಹುದಾದ ವಾತಾವರಣವನ್ನು ಪ್ರಧಾನಿ ಮೋದಿ ಸೃಷ್ಟಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.
ಕಾಶ್ಮೀರ ಕಣಿವೆಯಲ್ಲಿ ಇಂತಹ ಬದಲಾವಣೆ ತಂದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ ಧನ್ಯವಾದ ತಿಳಿಸಬೇಕು ಎಂದು ಬಿಜೆಪಿ ಹೇಳಿದೆ.
ಭಾರತ್ ಜೋಡೋ ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಧ್ವಜಾರೋಹಣ ನೆರವೇರಿಸಿದ ಬೆನ್ನಲ್ಲೇ ಬಿಜೆಪಿ ವಕ್ತಾರರೂ ಆಗಿರುವ ಮಾಜಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಜ.30 ರಂದು ಭಾರತ್ ಜೋಡೋ ಯಾತ್ರೆ ಅಂತ್ಯಗೊಳ್ಳಲಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರ ನಮಗಾಗಿ ಏನು ಮಾಡಿದೆ ಎಂದು ಕಾಶ್ಮೀರಿ ಪಂಡಿತರು ಕೇಳುತ್ತಿದ್ದಾರೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ ಲಾಲ್ ಚೌಕ್ ನಲ್ಲಿ ಹೆಮ್ಮೆಯಿಂದ ತಿರಂಗಾ ಹಾರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರ್ಕಾರ ಕಾಶ್ಮೀರದಲ್ಲಿ ಭಾರತದ ಯಾವುದೇ ಪ್ರಜೆ ಹೆಮ್ಮೆಯಿಂದ ತಿರಂಗಾ ಹಾರಿಸುವ ವಾತಾವರಣ ಸೃಷ್ಟಿಸಿದ್ದಾರೆ. ಇದಕ್ಕಾಗಿ ರಾಹುಲ್ ಗಾಂಧಿ ಧ್ವಜಾರೋಹಣದ ಬಳಿಕ ಪ್ರಧಾನಿ ಮೋದಿಗೆ ಧನ್ಯವಾದ ಹೇಳಬೇಕು ಎಂದು ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವರ ಹೇಳಿಕೆಗಳನ್ನು ಸಮರ್ಥಿಸಿಕೊಂಡಿರುವ ಜಮ್ಮು-ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ, ರಾಹುಲ್ ಗಾಂಧಿ ಕಾಶ್ಮೀರದಲ್ಲಿ ಧ್ವಜಾರೋಹಣ ನೆರವೇರಿಸಿರುವ ಕೀರ್ತಿ ಆರ್ಟಿಕಲ್ 370 ರದ್ದುಗೊಳಿಸಿದ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಆರ್ಟಿಕಲ್ 370 ರದ್ದುಗೊಳಿಸಿ ಪ್ರತ್ಯೇಕತಾವಾದ ಹಾಗೂ ಭಯೋತ್ಪಾದನೆಗೆ ತೀವ್ರ ಪೆಟ್ಟು ನೀಡಿದ್ದರಿಂದಲೇ ರಾಹುಲ್ ಗಾಂಧಿ ಇಂದು ಧ್ವಜಾರೋಹಣ ನೆರವೇರಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ದೇಶದ ಬಹುತೇಕ ಪ್ರದೇಶಗಳನ್ನು ಹಲವು ದಶಕಗಳ ಕಾಲ ಆಳಿತ್ತು. ಆದರೆ ಅದರ ಯಾವುದೇ ನಾಯಕರೂ ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಲು ಧೈರ್ಯ ಮಾಡಲಿಲ್ಲ ಎಂದು ರೈನಾ ಹೇಳಿದ್ದಾರೆ.
ಪ್ರಧಾನಿ ಮೋದಿ ಹಾಗೂ ಅಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಮುರಳಿ ಮನೋಹರ್ ಜೋಷಿ ಅವರು ಕಾಶ್ಮೀರದಲ್ಲಿ ಭಯೋತ್ಪಾದನೆ ತೀವ್ರವಾಗಿದ್ದಾಗ 1990 ರಲ್ಲಿ ಲಾಲ್ ಚೌಕ್ ನಲ್ಲಿ ರಾಷ್ಟ್ರಧ್ವಜ ಹಾರಿಸಿದ್ದರು ಎಂದು ರೈನಾ ಹೇಳಿದ್ದಾರೆ.