
ಬ್ರಿಜ್ ಭೂಷಣ್ ಸಿಂಗ್
ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಜಾಮೀನು ಸಿಕ್ಕಿದೆ.
ಇಂದು ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದ್ದು ವಿದೇಶ ಪ್ರವಾಸಕ್ಕೆ ತೆರಳುವಂತಿಲ್ಲ ಎಂದು ಷರತ್ತು ವಿಧಿಸಿದೆ. ಬ್ರಿಜ್ ಭೂಷಣ್ ಜಾಮೀನಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಾವು ಅದರ ವಿರುದ್ಧವೂ ಅಲ್ಲ ಅಥವಾ ಅದರ ಪರವಾಗಿಯೂ ಇಲ್ಲ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ರೂಸ್ ಅವೆನ್ಯೂ ಕೋರ್ಟ್ ಬೆಳಗ್ಗೆಯೇ ವಿಚಾರಣೆ ನಡೆಸಿ ಜಾಮೀನು ತೀರ್ಪನ್ನು ಕಾಯ್ದಿರಿಸಿತ್ತು. ನಂತರ ನ್ಯಾಯಾಲಯವು ಸರಿಯಾಗಿ 4 ಗಂಟೆಗೆ ವಿಚಾರಣೆಯನ್ನು ಪ್ರಾರಂಭಿಸಿತು. ಪ್ರಕರಣದಲ್ಲಿ ಬ್ರಿಜ್ ಭೂಷಣ್‌ಗೆ ನಿಯಮಿತ ಜಾಮೀನು ನೀಡುವ ನಿರ್ಧಾರವನ್ನು ಪ್ರಕಟಿಸಿತು.
ಇದನ್ನೂ ಓದಿ: ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕಳ ಪ್ರಕರಣ: WFI ಮುಖ್ಯಸ್ಥ ಬ್ರಿಜ್ ಭೂಷಣ್ ಗೆ ಮಧ್ಯಂತರ ಜಾಮೀನು ಮಂಜೂರು
ಜುಲೈ 18ರಂದು ನ್ಯಾಯಾಲಯ ಬ್ರಿಜ್ ಭೂಷಣ್‌ಗೆ ಮಧ್ಯಂತರ ಜಾಮೀನು ನೀಡಿತ್ತು. ಇದೀಗ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಿತ್ಯ ಜಾಮೀನಿನ ಮೇಲೆ ಹೊರ ಬರಲಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಚಾರ್ಜ್ ಶೀಟ್ ಸಲ್ಲಿಕೆಯಾಗುವವರೆಗೆ ಬಂಧಿಸುವ ಅಗತ್ಯವಿಲ್ಲ ಎಂದಿರುವಾಗ ಈಗ ಅದರ ಅಗತ್ಯ ಏನಿತ್ತು ಎಂದು ಅವರ ವಕೀಲರು ಹೇಳಿದ್ದರು. ಇದನ್ನೇ ಆಧಾರವಾಗಿ ಪರಿಗಣಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಬ್ರಿಜ್ ಭೂಷಣ್ ಅವರ ಆಪ್ತ ಸಹಾಯಕ ಮತ್ತು ಕುಸ್ತಿ ಫೆಡರೇಶನ್‌ನ ಮಾಜಿ ಅಧಿಕಾರಿ ವಿನೋದ್ ತೋಮರ್ ಅವರಿಗೂ ಪರಿಹಾರ ಸಿಕ್ಕಿದೆ. ಒಟ್ಟು 6 ಪ್ರಕರಣಗಳ ಪೈಕಿ 2 ಪ್ರಕರಣಗಳಲ್ಲಿ ಇವರನ್ನು ಸಹ ಆರೋಪಿಯನ್ನಾಗಿ ಮಾಡಲಾಗಿದೆ.
ಬ್ರಿಜ್ ಭೂಷಣ್ ಸಿಂಗ್ ಮತ್ತು ವಿನೋದ್ ತೋಮರ್ ಅವರಿಗೆ ತಲಾ 25,000 ರೂಪಾಯಿಗಳ ಶ್ಯೂರಿಟಿಯ ಮೇಲೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ತಿಳಿಸದೇ ವಿದೇಶ ಪ್ರವಾಸಕ್ಕೆ ಹೋಗುವುದಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿದೆ. ನಂತರ ಪ್ರಕರಣದ ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಿದೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ತಮ್ಮ ವಿರುದ್ಧದ ಆರೋಪಗಳನ್ನು ನಿರಂತರವಾಗಿ ತಿರಸ್ಕರಿಸುತ್ತ ಬಂದಿದ್ದಾರೆ.