ಚಿಕಿತ್ಸೆ ವೆಚ್ಚ ಭರಿಸಲು ಸೆಕ್ಸ್ ಗೆ ಸಹಕರಿಸುವಂತೆ ಒತ್ತಡ: ಬ್ರಿಜ್ ಭೂಷಣ್ ವಿರುದ್ಧದ ಎಫ್ಐಆರ್ ನಲ್ಲಿ ಆರೋಪ
ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಉಸಿರಾಟವನ್ನು ಪರೀಕ್ಷಿಸುವ ನೆಪದಲ್ಲಿ ಮಹಿಳಾ ಅಥ್ಲೀಟ್‌ಗಳನ್ನು ಅನುಚಿತವಾಗಿ ಸ್ಪರ್ಶಿಸಿಸುತ್ತಿದ್ದರು ಮತ್ತು ಅವರನ್ನು ತಡೆದು ಅಸಮರ್ಪಕ ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ದೆಹಲಿ ಪೊಲೀಸರು ಬಿಜೆಪಿ ಸಂಸದನ ವಿರುದ್ಧ ದಾಖಲಿಸಿರುವ ಎಫ್ಐಆರ್ ನಲ್ಲಿ ಆರೋಪಿಸಿದ್ದಾರೆ.
ಟೂರ್ನಮೆಂಟ್‌ಗಳಲ್ಲಿ ಉಂಟಾದ ಗಾಯಗಳಿಗೆ ಚಿಕಿತ್ಸೆ ಪಡೆಯಲು, ಫೆಡರೇಶನ್ ನಿಂದ ಚಿಕಿತ್ಸೆಯ ವೆಚ್ಚ ಭರಿಸಲು ಮತ್ತು ಆಹಾರ ತಜ್ಞರು ಅಥವಾ ತರಬೇತುದಾರರು ಅನುಮೋದಿಸದ ಆಹಾರ ನೀಡಲು ಸೆಕ್ಸ್ ಗೆ ಸಹಕರಿಸುವಂತೆ ಮಹಿಳಾ ಅಥ್ಲೀಟ್‌ಗಳಿಗೆ ಬ್ರಿಜ್ ಭೂಷಣ್ ಒತ್ತಾಯಿಸುತ್ತಿದ್ದರು ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಬ್ರಿಜ್ ಭೂಷಣ್ ಅವರು ಅಪ್ರಾಪ್ತ ಮಹಿಳಾ ಅಥ್ಲೀಟ್‌ಗಳ ಎದೆಗೆ ಕೈಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ. ಏಳು ಮಹಿಳಾ ಕುಸ್ತಿಪಟುಗಳು ನೀಡಿದ ದೂರುಗಳ ಆಧಾರದ ಮೇಲೆ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಬ್ರಿಜ್ ಭೂಷಣ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಏಪ್ರಿಲ್ 28 ರಂದು ಆರು ಕುಸ್ತಿಪಟುಗಳ ದೂರುಗಳನ್ನು ಸಂಯೋಜಿಸಿ ಒಂದು ಎಫ್ಐಆರ್ ಮತ್ತು ಅಪ್ರಾಪ್ತ ವಯಸ್ಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಮತ್ತೊಂದು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ. ಲಿಖಿತ ದೂರುಗಳನ್ನು ಏಪ್ರಿಲ್ 21 ರಂದು ಸಲ್ಲಿಸಲಾಗಿದೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ದೌರ್ಜನ್ಯದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ನನ್ನ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೆ ನಾನು ನೇಣು ಹಾಕಿಕೊಳ್ಳುತ್ತೇನೆ. ನಿಮ್ಮ ಬಳಿ (ಕುಸ್ತಿಪಟುಗಳು) ಏನಾದರೂ ಸಾಕ್ಷ್ಯಾಧಾರಗಳಿದ್ದರೆ ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತು ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದು ಬಿಜೆಪಿ ಸಂಸದ ಹೇಳಿದ್ದಾರೆ.