ಬಾಲಾಸೋರ್ ರೈಲು ದುರಂತ: ಅಧಿಕೃತ ಸಾವಿನ ಸಂಖ್ಯೆಯನ್ನು ಪ್ರಶ್ನಿಸಿದ ಮಮತಾ!
ಪಶ್ಚಿಮ ಬಂಗಾಳ: ಒಡಿಶಾದ ಬಾಲಸೋರ್ ಬಳಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದವರ ಕುರಿತು ರೈಲ್ವೆ ಸಚಿವಾಲಯ ನೀಡಿರುವ ಅಂಕಿ ಅಂಶಗಳನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಪ್ರಶ್ನಿಸಿದ್ದಾರೆ. ತಮ್ಮ ರಾಜ್ಯದ 61 ಜನರು ಸಾವನ್ನಪ್ಪಿದ್ದು, ಇನ್ನೂ 182 ಜನರು ನಾಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸಚಿವಾಲಯದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಒಂದು ವೇಳೆ ಒಂದು ರಾಜ್ಯದಿಂದ, 182 ಮಂದಿ ನಾಪತ್ತೆಯಾಗಿದ್ದು, 61 ಮಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರೆ, ಅಂಕಿಅಂಶಗಳು ಹೇಗೆ ಸರಿಯಾಗಿವೆ? ಎಂದು ಅವರು ಪ್ರಶ್ನಿಸಿದರು.
ತ್ರಿವಳಿ ರೈಲು ದುರಂತದಲ್ಲಿ 275 ಜನರು ಸಾವನ್ನಪ್ಪಿದ್ದು, 1,175 ಮಂದಿ ಗಾಯಗೊಂಡಿರುವುದಾಗಿ ಅಧಿಕೃತ ಅಂಕಿ ಅಂಶಗಳು ಹೇಳಿವೆ. ಅತ್ಯಂತ ದುಃಖಕರ ಪರಿಸ್ಥಿತಿಯ ಹೊರತಾಗಿಯೂ ಬಿಜೆಪಿ ತನ್ನನ್ನು ಮಾತನಾಡಲು ಒತ್ತಾಯಿಸಿದೆ ಎಂದು ಪ್ರತಿಪಾದಿಸಿದ ಅವರು, ತಾನೂ ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ಹೊಸ ಸಿಗ್ನಲ್ ವ್ಯವಸ್ಥೆ ಮತ್ತು ಘರ್ಷಣೆ ತಡೆ ಸಾಧನವನ್ನು ಪರಿಚಯಿಸಲಾಯಿತು ಎಂದು ಹೇಳಿದರು.
"ವಂದೇ ಭಾರತ್ ಹೆಸರು ಚೆನ್ನಾಗಿದೆ, ಆದರೆ ಮರದ ಕೊಂಬೆಯೊಂದು ಅದರ ಮೇಲೆ ಬಿದ್ದಾಗ ಏನಾಯಿತು ಎಂಬುದನ್ನು ನೀವು ನೋಡಿದ್ದೀರಿ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. ಜೂನ್ 2 ರಂದು ಸಂಜೆ 7 ಗಂಟೆ ಸುಮಾರಿನಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್ ನ ಹೆಚ್ಚಿನ ಬೋಗಿಗಳು ಹಳಿ ತಪ್ಪಿ ನಿಂತಿದ್ದ ಗೂಡ್ಸ್ ರೈಲಿಗೆ ಅಪ್ಪಳಿಸಿತ್ತು. ಅದೇ ಸಮಯದಲ್ಲಿ ಹಾದು ಹೋಗುತ್ತಿದ್ದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್‌ನ ಕೊನೆಯ ಕೆಲವು ಬೋಗಿಗಳ ಮೇಲೆ ಕೋರಮಂಡಲ್‌ನ ಕೆಲವು ಬೋಗಿಗಳು ಉರುಳಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಸಾವು ನೋವು ಉಂಟಾಗಿದೆ.
ಮಾನವ ದೋಷ, ಸಿಗ್ನಲ್ ವೈಫಲ್ಯ ಮತ್ತು ಮೂರು ರೈಲುಗಳ ಅಪಘಾತದ ಹಿಂದಿನ ಸಂಭವನೀಯ ಕಾರಣಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.