ಕೇಂದ್ರ ಕ್ರೀಡಾ ಸಚಿವರೊಂದಿಗೆ ಸಭೆ; ಜೂನ್ 15 ರವರೆಗೆ ಪ್ರತಿಭಟನೆ ಹಿಂಪಡೆಯಲು ಕುಸ್ತಿಪಟುಗಳು ಒಪ್ಪಿಗೆ
ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ತಾತ್ಕಾಲಿಕವಾಗಿ ಜೂನ್ 15ರ ವರೆಗೆ ಪ್ರತಿಭಟನೆ...
Published: 07th June 2023 07:21 PM | Last Updated: 07th June 2023 07:52 PM | A+A A-

ಸಾಕ್ಷಿ ಮಲಿಕ್
ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ತಾತ್ಕಾಲಿಕವಾಗಿ ಜೂನ್ 15ರ ವರೆಗೆ ಪ್ರತಿಭಟನೆ ಹಿಂಪಡೆಯಲು ಒಪ್ಪಿಕೊಂಡಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಇಂದು ಪ್ರತಿಭಟನಾನಿರತ ಕುಸ್ತಿಪಟುಗಳೊಂದಿಗೆ ಸುಮಾರು 5 ಗಂಟೆಗಳ ಕಾಲ ಸಭೆ ನಡೆಸಿದರು. ಈ ವೇಳೆ ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ಪೊಲೀಸರು ಜೂನ್ 15 ರೊಳಗೆ ತನಿಖೆ ಪೂರ್ಣಗೊಳಿಸಲಿದ್ದಾರೆ. ಅಲ್ಲಿಯವರೆಗೆ ಕಾಯುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಪ್ರತಿಭಟನಾನಿರತ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಒಂದು ವಾರದವರೆಗೆ ಹಿಂಪಡೆಯಲು ಒಪ್ಪಿಕೊಂಡಿದ್ದಾರೆ.
ಸಭೆ ಬಳಿಕ ಮಾತನಾಡಿದ ಕುಸ್ತಿಪಟುಗಳು, ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವುದಾಗಿ ಮತ್ತು ಜೂನ್ 15ರೊಳಗೆ ತನಿಖೆ ಪೂರ್ಣಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಹೀಗಾಗಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಜೂನ್ 15 ರ ನಂತರ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಅವರು ಹೇಳಿದ್ದಾರೆ.
ಇನ್ನು ಜೂನ್ 15 ರೊಳಗೆ ತನಿಖೆ ಪೂರ್ಣಗೊಳಿಸಲಾಗುವುದು ಮತ್ತು ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ನಾವು ಕುಸ್ತಿಪಟುಗಳಿಗೆ ಭರವಸೆ ನೀಡಿದ್ದೇವೆ. ಜೂನ್ 30 ರೊಳಗೆ ಕುಸ್ತಿ ಫೆಡರೇಶನ್‌ಗೆ ಚುನಾವಣೆ ನಡೆಯಲಿದೆ" ಎಂದು ಸಭೆ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಆದರೆ ಆರೋಪಿ ಬ್ರಿಜ್ ಭೂಷಣ್ ಬಂಧನದ ಬಗ್ಗೆ ಯಾವುದೇ ಭರವಸೆ ನೀಡಿಲ್ಲ.
ಕುಸ್ತಿಪಟುಗಳು ಮೇ 28 ರಂದು ‘ಮಹಿಳಾ ಸಮ್ಮಾನ್ ಮಹಾಪಚಾಯತ್’ ನಡೆಸಲು ಅನುಮತಿಯಿಲ್ಲದೆ ಹೊಸ ಸಂಸತ್ ಭವನದ ಕಡೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದಾಗ ಅವರ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.