
ಕೆನಡಾದ ಪರೇಡ್ ನಲ್ಲಿ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಪ್ರದರ್ಶನ
ನವದೆಹಲಿ: ಕೆನಡಾದ ಬ್ರ್ಯಾಂಪ್ಟನ್ ನಲ್ಲಿ ನಡೆದ ಪರೇಡ್ ಒಂದರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಪ್ರದರ್ಶನಗೊಂಡಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೆನಡಾದ ಅಧಿಕಾರಿಗಳೊಂದಿಗೆ ಮಾತನಾಡಬೇಕು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಕಾಂಗ್ರೆಸ್ ಒತ್ತಾಯಿಸಿದೆ.
ಭಾರತದಲ್ಲಿರುವ ಕೆನಡಾದ ಹೈ ಕಮಿಷನರ್ ಕೆಮರಾನ್ ಮ್ಯಾಕೆ ಈ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತದ ಮಾಜಿ ಪ್ರಧಾನಿಯೊಬ್ಬರ ಹತ್ಯೆಯನ್ನು ಸಂಭ್ರಮಿಸಿರುವುದರ ವರದಿಗಳನ್ನು ಕಂಡು ಗಾಬರಿಯಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹುತಾತ್ಮ ಪಟ್ಟ ಗಾಂಧಿ ಕುಟುಂಬದ ಏಕಸ್ವಾಮ್ಯವಲ್ಲ; ಇಂದಿರಾ, ರಾಜೀವ್ ಹತ್ಯೆ ಆಕಸ್ಮಿಕ ಅಷ್ಟೇ: ಉತ್ತರಾಖಂಡ ಸಚಿವ
ಕೆನಡಾದಲ್ಲಿ ದ್ವೇಷ ಅಥವಾ ಹಿಂಸೆಯ ವೈಭವೀಕರಣಕ್ಕೆ ಯಾವುದೇ ಆಸ್ಪದವಿಲ್ಲ. ನಾನು ಇಂತಹ ಚಟುವಟಿಕೆಗಳನ್ನು ಖಂಡಿಸುತ್ತೇನೆ ಎಂದು ಮ್ಯಾಕೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ, ಇತ್ತೀಚೆಗೆ ಬ್ರಾಂಪ್ಟನ್‌ನಲ್ಲಿ ನಡೆದ ಪರೇಡ್‌ನಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ಸ್ತಬ್ಧಚಿತ್ರ ಇದ್ದ ಒಂದು ವೀಡಿಯೊವನ್ನು ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಹಂಚಿಕೊಂಡಿದ್ದರು.
ಕೆನಡಾದ ಬ್ರಾಂಪ್ಟನ್ ನಗರದಲ್ಲಿ ನಡೆದ 5 ಕಿಮೀ ಉದ್ದದ ಪರೇಡ್‌ನಲ್ಲಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಬಿಂಬಿಸುವ ಸ್ತಬ್ಧಚಿತ್ರ ಕಂಡು ಭಾರತೀಯನಾಗಿ ನಾನು ದಿಗ್ಭ್ರಮೆಗೊಂಡಿದ್ದೇನೆ, ”ಎಂದು ದಿಯೋರಾ ಟ್ವೀಟ್ ಮಾಡಿದ್ದರು. ದಿಯೋರಾ ಅವರ ಟ್ವೀಟ್ ನ್ನು ವಿದೇಶಾಂಗ ಸಚಿವರಿಗೆ ಟ್ಯಾಗ್ ಮಾಡಿದ್ದ ಜೈರಾಮ್ ರಮೇಶ್, ಡಾ ಎಸ್ ಜೈಶಂಕರ್ ಕೆನಡಾದ ಅಧಿಕಾರಿಗಳೊಂದಿಗೆ ಇದನ್ನು ಗಂಭೀರವಾಗಿ ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ.