ಗೋಡ್ಸೆ ದೇಶದ 'ಮಗ', ಔರಂಗಜೇಬ್‌ನಂತೆ ದಾಳಿಕೋರನಲ್ಲ: ಓವೈಸಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತಿರುಗೇಟು
ಗೋಡ್ಸೆ ಗಾಂಧಿಯ ಹಂತಕನಾಗಿದ್ದರೂ ಅವನೂ ಈ ದೇಶದ ಮಗ. ಅವರು ಭಾರತದಲ್ಲಿ ಜನಿಸಿದ್ದು ಔರಂಗಜೇಬ್ ಮತ್ತು ಬಾಬರ್ ನಂತೆ ಆಕ್ರಮಣಕಾರನಲ್ಲ. ಬಾಬರನ ಮಗ ಎಂದು ಯಾರು ಸಂತೋಷ ಪಡುತ್ತಾರೋ ಆ ವ್ಯಕ್ತಿ ಭಾರತ ಮಾತೆಯ ಮಗನಾಗಲು ಸಾಧ್ಯವಿಲ್ಲ...
Published: 10th June 2023 08:21 PM | Last Updated: 10th June 2023 08:21 PM | A+A A-

ಗಿರಿರಾಜ್ ಸಿಂಗ್
ನವದೆಹಲಿ: ಗೋಡ್ಸೆ ಗಾಂಧಿಯ ಹಂತಕನಾಗಿದ್ದರೂ ಅವನೂ ಈ ದೇಶದ ಮಗ. ಅವರು ಭಾರತದಲ್ಲಿ ಜನಿಸಿದ್ದು ಔರಂಗಜೇಬ್ ಮತ್ತು ಬಾಬರ್ ನಂತೆ ಆಕ್ರಮಣಕಾರನಲ್ಲ. ಬಾಬರನ ಮಗ ಎಂದು ಯಾರು ಸಂತೋಷ ಪಡುತ್ತಾರೋ ಆ ವ್ಯಕ್ತಿ ಭಾರತ ಮಾತೆಯ ಮಗನಾಗಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ 'ಔರಂಗಜೇಬ್ ಕಿ ಔಲಾದಿನ್' ಹೇಳಿಕೆಗೆ ಹೈದರಾಬಾದ್ ಸಂಸದ ಓವೈಸಿ ಪ್ರತಿಕ್ರಿಯಿಸಿದ ನಂತರ ಗಿರಿರಾಜ್ ಸಿಂಗ್ ಅವರ ಹೇಳಿಕೆ ಹೊರಬಿದ್ದಿವೆ. ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಕುರಿತು ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಕುರಿತು ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆಯ ನಂತರ ಬುಧವಾರ ಕೊಲ್ಲಾಪುರದಲ್ಲಿ ಕರ್ಫ್ಯೂ ವಿಧಿಸಲಾಯಿತು.
ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಇದ್ದಕ್ಕಿದ್ದಂತೆ ಔರಂಗಜೇಬನ ಮಕ್ಕಳು ಹುಟ್ಟಿಕೊಂಡಿದ್ದಾರೆ ಎಂದು ಫಡ್ನವಿಸ್ ಎಎನ್‌ಐಗೆ ಹೇಳಿದ್ದರು. ಅವರು ಔರಂಗಜೇಬನ ಪೋಸ್ಟರ್ಗಳನ್ನು ತೋರಿಸಿದ್ದು ಇದರಿಂದಾಗಿ ಅಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಔರಂಗಜೇಬನ ಈ ಮಕ್ಕಳು ಎಲ್ಲಿಂದ ಬಂದರು? ಇದರ ಹಿಂದೆ ಯಾರಿದ್ದಾರೆ? ನಾವು ಅದನ್ನು ಲೆಕ್ಕಾಚಾರ ಮಾಡುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ: ಹಿಂಸಾಚಾರ ಬಳಿಕ ಸಹಜ ಸ್ಥಿತಿಗೆ ಮರಳಿದ ಕೊಲ್ಲಾಪುರ: ಎಲ್ಲೆಡೆ ಬಿಗಿ ಭದ್ರತೆ ಮುಂದುವರಿಕೆ
ಇದಕ್ಕೆ ತಿರುಗೇಟು ನೀಡಿದ ಓವೈಸಿ, 'ಮಹಾರಾಷ್ಟ್ರದ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರು ‘ಔರಂಗಜೇಬ್ ಕೆ ಔಲಾದ್’ ಎಂದು ಹೇಳಿದ್ದಾರೆ. ನಿಮಗೆ ಎಲ್ಲವೂ ತಿಳಿದಿದೆಯೇ? ನೀವು (ಫಡ್ನವಿಸ್) ಅಂತಹ ಪರಿಣಿತರು ಎಂದು ನನಗೆ ತಿಳಿದಿರಲಿಲ್ಲ. ಹಾಗಾದರೆ ಗೋಡ್ಸೆ ಮತ್ತು ಆಪ್ಟೆಯವರ ಮಗು ಯಾರು ಎಂದು ನಿಮಗೆ ತಿಳಿದಿರಬೇಕು. ಯಾರವರು?" ಎಂದು ಪ್ರಶ್ನಿಸಿದ್ದರು.
ಓವೈಸಿಗೆ ತಿರುಗೇಟು ನೀಡಿದ ಗಿರಿರಾಜ್ ಸಿಂಗ್, ನಾಥೂರಾಂ ಗೋಡ್ಸೆಯನ್ನು ಭಾರತದ ಸುಪುತ್ರ ಎಂದು ಕರೆದಿದ್ದಾರೆ. ತಮ್ಮನ್ನು ತಾವು ಬಾಬರ್ ಮತ್ತು ಔರಂಗಜೇಬನ ಮಕ್ಕಳು ಎಂದು ಕರೆದುಕೊಳ್ಳುವುದರಲ್ಲಿ ಸಂತೋಷಪಡುವವರು ಭಾರತಮಾತೆಯ ನಿಜವಾದ ಮಕ್ಕಳಲ್ಲ ಎಂದು ಹೇಳಿದರು.