2016 ರಲ್ಲಿ ಪೆಲೆಟ್ ಗಳಿಂದ ದೃಷ್ಟಿ ಕಳೆದುಕೊಂಡಿದ್ದ ಶೋಪಿಯಾನ್ ಯುವತಿ 12 ನೇ ತರಗತಿಯಲ್ಲಿ ಉತ್ತೀರ್ಣ
ದಕ್ಷಿಣ ಕಾಶ್ಮೀರದಲ್ಲಿರುವ ಶೋಪಿಯಾನ್ ಜಿಲ್ಲೆಯ 18 ವರ್ಷದ ಯುವತಿ ಇನ್ಶಾ ಮುಷ್ತಾಕ್ 2016 ರಲ್ಲಿ ಪೆಲೆಟ್ ಗಳಿಂದ ದೃಷ್ಟಿ ಕಳೆದುಕೊಂಡಿದ್ದಳು. ಆಕೆ ಈಗ 12 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ.
Published: 10th June 2023 03:58 PM | Last Updated: 10th June 2023 05:55 PM | A+A A-

ಪರೀಕ್ಷೆ (ಸಂಗ್ರಹ ಚಿತ್ರ)
ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿರುವ ಶೋಪಿಯಾನ್ ಜಿಲ್ಲೆಯ 18 ವರ್ಷದ ಯುವತಿ ಇನ್ಶಾ ಮುಷ್ತಾಕ್ 2016 ರಲ್ಲಿ ಪೆಲೆಟ್ ಗಳಿಂದ ದೃಷ್ಟಿ ಕಳೆದುಕೊಂಡಿದ್ದಳು. ಆಕೆ ಈಗ 12 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ.
ಇನ್ಶಾ ಮುಷ್ತಾಕ್ 319 ಅಂಕಗಳನ್ನು ಪಡೆದಿದ್ದಾರೆ. ನಾನು 12 ನೇ ತರಗತಿ ಉತ್ತೀರ್ಣಳಾಗಿರುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ. ನನ್ನ ಪೋಷಕರು ನೀಡಿದ ಬೆಂಬಲಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದಿರುವ ಇನ್ಶಾ ಮುಷ್ತಾಕ್, ಪದವಿ ಪಡೆದು ಯುಪಿಎಸ್ ಸಿ ಪರೀಕ್ಷೆ ಬರೆಯುವ ಕನಸು ಹೊತ್ತಿದ್ದಾರೆ.
ನನ್ನ ಮಗಳು ದೃಷ್ಟಿ ಕಳೆದುಕೊಂಡ ಬಳಿಕ ಆಕೆಗೆ ಬೆಂಬಲ ನೀಡಿ ಪಾಠ ಮಾಡಿದ ಶಿಕ್ಷಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಇನ್ಶಾಳ ತಂದೆ ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.
ಜುಲೈ 11, 2016 ರಂದು ಹಿಜ್ಬ್ ಕಮಾಂಡರ್ ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಕೊಂದ ಮೂರು ದಿನಗಳ ನಂತರ ಶೋಪಿಯಾನ್ ಜಿಲ್ಲೆಯ ಸೆಡೋವ್ ಗ್ರಾಮದ ತನ್ನ ಮನೆಯೊಳಗಿದ್ದ ಇನ್ಶಾಗೆ ಪೆಲೆಟ್ ಗನ್ ಗಳಿಂದ ಪೆಟ್ಟು ಬಿದ್ದು ದೃಷ್ಟಿ ಕಳೆದುಕೊಂಡಿದ್ದಳು.
ಆಕೆ ತನ್ನ ಮನೆಯ ಕಿಟಕಿಯಿಂದ ಪ್ರತಿಭಟನೆಯನ್ನು ನೋಡುತ್ತಿದ್ದಾಗ ಭದ್ರತಾ ಸಿಬ್ಬಂದಿ ಹಾರಿಸಿದ ಪೆಲ್ಲೆಟ್‌ಗಳು ಹೊಕ್ಕಿ ಎರಡೂ ಕಣ್ಣುಗಳಿಗೆ ಗಾಯವಾಗಿತ್ತು. ಕಣಿವೆಯಲ್ಲಿ ಮತ್ತು ಜಮ್ಮು-ಕಾಶ್ಮೀರದ ಹೊರಗೆ ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾದರೂ ಸಹ ಆಕೆಗೆ ಮತ್ತೆ ದೃಷ್ಟಿ ಬರಲಿಲ್ಲ.
12 ನೇ ತರಗತಿಯ ಪರೀಕ್ಷೆಗಳ ಫಲಿತಾಂಶವನ್ನು ಜಮ್ಮು-ಕಾಶ್ಮೀರದ ಸ್ಟೇಟ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ ನಿನ್ನೆ ಸಂಜೆ ಶ್ರೀನಗರದಲ್ಲಿ ಘೋಷಿಸಿದ್ದು ಶೇಕಡಾ 64.59 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಒಟ್ಟು 1,27,636 ಅಭ್ಯರ್ಥಿಗಳು ದಾಖಲಾಗಿದ್ದು, 82,441 ಮಂದಿ ಯಶಸ್ವಿಯಾಗಿ ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ ಅರ್ಹತೆ ಪಡೆದಿದ್ದಾರೆ.