ಬಿಪೊರ್ ಜೋಯ್ ಚಂಡಮಾರುತ ಪರಿಣಾಮ ಈ ಬಾರಿ ಮುಂಗಾರು ಕ್ಷೀಣ, ವಿಳಂಬ
ನವದೆಹಲಿ: ಗುಜರಾತ್ ಕರಾವಳಿ ತೀರಕ್ಕೆ ಇಂದು ಗುರುವಾರ ಅಪ್ಪಳಿಸಲಿರುವ ಬಿಪೊರ್ ಜೋಯ್ ಚಂಡಮಾರುತವು ಮುಂಗಾರು ಮಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಜೂನ್ 18 ರ ನಂತರ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಒಡಿಶಾದಂತಹ ರಾಜ್ಯಗಳಲ್ಲಿ ಮಾನ್ಸೂನ್ ಪ್ರಗತಿಯನ್ನು ಪ್ರಾರಂಭಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಹವಾಮಾನ ಶಾಸ್ತ್ರದ ಮಹಾ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ಚಂಡಮಾರುತವು ಕೊನೆಗೊಂಡ ನಂತರ, ಮುಂಗಾರು ಮಳೆ ಜೂನ್ 18 ಮತ್ತು ಜೂನ್ 25 ರ ನಡುವೆ ಪರ್ಯಾಯ ಭಾರತ ಮತ್ತು ಪೂರ್ವ ಭಾರತದ ಹೆಚ್ಚಿನ ಭಾಗಗಳನ್ನು ಆವರಿಸುತ್ತದೆ ಎಂದು ಹವಾಮಾನ ಇಲಾಖೆಯ ಮತ್ತೊಬ್ಬ ವಿಜ್ಞಾನಿ ಹೇಳಿದ್ದಾರೆ.
ಚಂಡಮಾರುತವು ಹುಲ್ಲಿನ ಮನೆಗಳನ್ನು ನಾಶಮಾಡುವ ಸಾಧ್ಯತೆಯಿದೆ, ಪಕ್ಕಾ ಮನೆಗಳು ಮತ್ತು ಓವರ್ ಹೆಡ್ ವಿದ್ಯುತ್ ಪ್ರಸರಣ ಮಾರ್ಗಗಳನ್ನು ಹಾನಿಗೊಳಿಸುತ್ತದೆ, ದೊಡ್ಡ ಮರಗಳನ್ನು ಕಿತ್ತುಹಾಕುವ ಮತ್ತು ತಗ್ಗು ಪ್ರದೇಶಗಳನ್ನು ಮುಳುಗಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.
ಚಂಡಮಾರುತ 2-3 ಮೀಟರ್ ವರೆಗೆ ಅಲೆಗಳನ್ನು ಉಂಟುಮಾಡುತ್ತದೆ. ಚಂಡಮಾರುತವು ರಾಜಸ್ಥಾನ, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಮಳೆಯನ್ನು ಉಂಟುಮಾಡುತ್ತದೆ. ಆರಂಭದಲ್ಲಿ ಬಿಪೊರ್ ಜೋಯ್ ಚಂಡಮಾರುತವು ಉತ್ತರದ ಕಡೆಗೆ ಚಲಿಸಿತ್ತು. ಹಲವಾರು ಬಾರಿ ಮಾರ್ಗಗಳನ್ನು ಬದಲಾಯಿಸಿದೆ. ಅಂತಿಮವಾಗಿ, ಅದು ಗುಜರಾತ್ ಕರಾವಳಿಯ ಈಶಾನ್ಯದ ಕಡೆಗೆ ತಿರುಗಿತು.
ಹೆಚ್ಚಿನ ಅರಬ್ಬಿ ಸಮುದ್ರದ ಚಂಡಮಾರುತಗಳು ವಾಯುವ್ಯ ಕಡೆಗೆ ಚಲಿಸುತ್ತವೆ, ವಿಶೇಷವಾಗಿ ಓಮನ್ ಚಂಡಮಾರುತ ವಾಯವ್ಯ ಕಡೆಗೆ ಚಲಿಸಿತ್ತು ಎಂದು ಹವಾಮಾನ ಪರಿಹಾರಗಳನ್ನು ಒದಗಿಸುವ ಖಾಸಗಿ ಕಂಪನಿಯಾದ ಸ್ಕೈಮೆಟ್‌ನ ಮಹೇಶ್ ಪಲಾವತ್ ಹೇಳುತ್ತಾರೆ. ಈ ಚಂಡಮಾರುತವು ಹಲವಾರು ಬಾರಿ ತನ್ನ ಪಥವನ್ನು ಬದಲಾಯಿಸಿ ಈಗ ಈಶಾನ್ಯ ಗುಜರಾತ್ ಕಡೆಗೆ ತಿರುಗಿದ ಕಾರಣ ವೇಗವು ಗಂಟೆಗೆ 180 ಕಿಮೀಯಿಂದ 130 ಕಿಮೀಗೆ ಕಡಿಮೆಯಾಗಿದೆ ಎಂದರು.
1965 ರಿಂದ ಗುಜರಾತ್‌ಗೆ ನೇರವಾಗಿ ಅಪ್ಪಳಿಸುತ್ತಿರುವ ಜೂನ್ ತಿಂಗಳ ಮೂರನೇ ಚಂಡಮಾರುತ ಬಿಪೊರ್ ಜೋಯ್ ಚಂಡಮಾರುತವಾಗಿದೆ. ಇದಕ್ಕೂ ಮೊದಲು ಎರಡು ಚಂಡಮಾರುತಗಳು ಗುಜರಾತ್ ಕರಾವಳಿಯನ್ನು ದಾಟಿದ್ದವು - 1996 ರಲ್ಲಿ ತೀವ್ರ ಚಂಡಮಾರುತ ಮತ್ತು 1998 ರಲ್ಲಿ ಮತ್ತೊಂದು ತೀವ್ರ ಚಂಡಮಾರುತ ಅಪ್ಪಳಿಸಿದ್ದವು.
ಬಿಪೊರ್ ಜೋಯ್ ಈಗ ಅರೇಬಿಯನ್ ಸಮುದ್ರದ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿಯ ಚಂಡಮಾರುತವಾಗಿದೆ (192 ಗಂಟೆಗಳ ಚಂಡಮಾರುತದ ಶಕ್ತಿ) ಜೂನ್ 1998ರ ಚಂಡಮಾರುತದ ದಾಖಲೆಯನ್ನು ಮುರಿದಿದೆ ಎಂದು ಜಾಗತಿಕವಾಗಿ ಸಾಗರ-ಚಂಡಮಾರುತ ಚಟುವಟಿಕೆಯಲ್ಲಿ ಕೆಲಸ ಮಾಡುವ ದಕ್ಷಿಣ ಕೊರಿಯಾ ಮೂಲದ ವಿಜ್ಞಾನಿ ವಿನೀತ್ ಕುಮಾರ್ ಹೇಳಿದ್ದಾರೆ.
ಮುಂದಿನ ಐದು ದಿನಗಳ ಕಾಲ ಪೂರ್ವ ಭಾರತ, ವಾಯುವ್ಯ ಭಾರತ ಮತ್ತು ಮಧ್ಯ ಭಾರತದಲ್ಲಿ ಶಾಖದ ಅಲೆಗಳು ಮೇಲುಗೈ ಸಾಧಿಸಲಿವೆ. ಗುಜರಾತ್ ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನವು 5-6 ಡಿಗ್ರಿ ಸೆಲ್ಸಿಯಸ್ ಮತ್ತು ವಾಯುವ್ಯ ಭಾರತದಲ್ಲಿ 2-4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ. ಮುಂದಿನ ಐದು ದಿನಗಳಲ್ಲಿ ದೇಶದ ಉಳಿದ ಭಾಗಗಳಲ್ಲಿ ಯಾವುದೇ ಪ್ರಮುಖ ಹವಾಮಾನ ಬದಲಾವಣೆಗಳಿಲ್ಲದಿದ್ದರೂ ಈಶಾನ್ಯ ಭಾರತದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ