ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಬೆಳಗಿನ ಜಾವ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕಕ್ಕೆ ಪ್ರಯಾಣಿಸುವ ಮುನ್ನ ಟ್ವೀಟ್ ಮಾಡಿರುವ ಅವರು, ಅಮೆರಿಕಕ್ಕೆ ಪ್ರಯಾಣ ಬೆಳೆಸುತ್ತಿದ್ದು ನ್ಯೂಯಾರ್ಕ್ ಸಿಟಿ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ.
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆಗೆ ಮಾತುಕತೆ, ಯುಎಸ್ ಕಾಂಗ್ರೆಸ್ ನ ಜಂಟಿ ಸದನ ಉದ್ದೇಶಿಸಿ ಮಾತುಕತೆ ಹೀಗೆ ಇನ್ನೂ ಅನೇಕ ಕಾರ್ಯಕ್ರಮಗಳು ಭೇಟಿಯ ಸಂದರ್ಭದಲ್ಲಿ ಇವೆ ಎಂದರು.
ಪ್ರಧಾನಿ ಮೋದಿಯವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಅಮೆರಿಕದ ಪ್ರಥಮ ಮಹಿಳೆ ಜಿಲ್ಲ್ ಬೈಡನ್ ಆಹ್ವಾನ ನೀಡಿದ್ದರು. ಅಮೆರಿಕ ಪ್ರವಾಸದ ಮೊದಲ ಭಾಗವಾಗಿ ನಾಳೆ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆ ಕೇಂದ್ರ ಕಚೇರಿಯಿರುವ ನ್ಯೂಯಾರ್ಕ್ ನಗರದಲ್ಲಿ ಮೊದಲ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಪಾಲ್ಗೊಳ್ಳಲಿದ್ದಾರೆ.
ನಂತರ ಪ್ರಧಾನ ಮಂತ್ರಿಗಳು ವಾಷಿಂಗ್ಟನ್ ಡಿಸಿಗೆ ತೆರಳಲಿದ್ದಾರೆ. ಅಲ್ಲಿ ಜೂನ್ 22ರಂದು ಶ್ವೇತಭವನದಲ್ಲಿ ಪ್ರಧಾನಿಯವರಿಗೆ ಸಾಂಪ್ರದಾಯಿಕ ಸ್ವಾಗತ ದೊರಕಲಿದೆ. ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿ ಮಾಡಿ ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಅಮೆರಿಕ ಅಧ್ಯಕ್ಷರು ಪ್ರಧಾನಿ ಮೋದಿಯವರಿಗೆ ಔತಣಕೂಟ ಏರ್ಪಡಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಜೂನ್ 22ರಂದು ಯುಎಸ್ ಕಾಂಗ್ರೆಸ್ ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.
ಐತಿಹಾಸಿಕ ಭಾಷಣ ಮಾಡಲಿರುವ ಪ್ರಧಾನಿ: ಅಮೆರಿಕ ಸಂಸತ್ತಿನ ಉಭಯ ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ ಮತ್ತು ಸೆನೆಟ್ ನ ಸದಸ್ಯರನ್ನು ಉದ್ದೇಶಿಸಿ ಪ್ರಧಾನಿ ಮೋದಿಯವರು ಐತಿಹಾಸಿಕ ಭಾಷಣ ಮಾಡಲಿದ್ದಾರೆ. ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಎರಡು ಬಾರಿ ಮಾತನಾಡುವ ಮೊಟ್ಟ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆ ನರೇಂದ್ರ ಮೋದಿಯವರದ್ದು.
ಏಳು ವರ್ಷಗಳ ಹಿಂದೆ ಇದೇ ರೀತಿ ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಪ್ರಧಾನಿ ಮೋದಿಯವರು ಭಾಷಣ ಮಾಡಿದ್ದರು. ಇದು ಉಭಯ ದೇಶಗಳ ನಡುವಿನ ಸಂಬಂಧ ಬಲಪಡಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಅಮೆರಿಕ ಭೇಟಿಯ ನಂತರ ಮೋದಿಯವರು ಜೂನ್ 24 ಮತ್ತು 25ರಂದು ಈಜಿಪ್ಟ್ ಪ್ರವಾಸ ಕೈಗೊಳ್ಳಲಿದ್ದಾರೆ.
Advertisement