ನಾಳೆ ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆ: ಆರ್‌ಎಲ್‌ಡಿ ಗೈರು, ಬಿಎಸ್‌ಪಿಗಿಲ್ಲ ಆಹ್ವಾನ
ಲಖನೌ: ಪಾಟ್ನಾದಲ್ಲಿ ಶುಕ್ರವಾರ ನಡೆಯಲಿರುವ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಉತ್ತರ ಪ್ರದೇಶದಿಂದ ಸಮಾಜವಾದಿ ಪಕ್ಷ ಮಾತ್ರ ಭಾಗವಹಿಸುತ್ತಿದ್ದು, ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರಿಗೆ ಆಹ್ವಾನ ನೀಡಿಲ್ಲ. ಆದರೆ ಕುಟುಂಬದ ಕಾರ್ಯಕ್ರಮದ ಕಾರಣದಿಂದ ರಾಷ್ಟ್ರೀಯ ಲೋಕದಳ(ಆರ್ ಎಲ್ ಡಿ ) ಮುಖ್ಯಸ್ಥ ಜಯಂತ್ ಚೌಧರಿ ಸಭೆಯಿಂದ ಹೊರಗುಳಿಯುತ್ತಿದ್ದಾರೆ.
ಆದಾಗ್ಯೂ, ಈ ಸಭೆಯು "ಪ್ರತಿಪಕ್ಷಗಳ ಏಕತೆಯ ಹಾದಿಯಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ" ಎಂದು ಜಯಂತ್ ಚೌಧರಿ ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಜಂಟಿ ಕಾರ್ಯತಂತ್ರ ರೂಪಿಸಲು ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ(ಯುನೈಟೆಡ್) ನಾಯಕ ನಿತೀಶ್ ಕುಮಾರ್ ಅವರು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಕೈಜೋಡಿಸಬೇಕು ಎಂದು ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಕರೆ ನೀಡಿದ್ದಾರೆ.
"ನಾವು 2024 ರಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಸಿದ್ಧರಿರುವ ಪಕ್ಷಗಳನ್ನು ಆಹ್ವಾನಿಸಿದ್ದೇವೆ. ಬಿಎಸ್‌ಪಿ ಮೈತ್ರಿಯ ಭಾಗವಾಗುವುದಿಲ್ಲ ಎಂದು ಹೇಳುತ್ತಿದೆ. ಹೀಗಾಗಿ ನಮ್ಮ ಆಹ್ವಾನವನ್ನು ಏಕೆ ವ್ಯರ್ಥ ಮಾಡಬೇಕು"? ಎಂದು ಜೆಡಿಯು ಮುಖ್ಯ ವಕ್ತಾರ ಕೆ ಸಿ ತ್ಯಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ