60 ವರ್ಷಗಳ ನಂತರ, ನಾಗಾಲ್ಯಾಂಡ್ ವಿಧಾನಸಭೆಗೆ ಇಬ್ಬರು ಮಹಿಳಾ ಶಾಸಕರು ಆಯ್ಕೆ

ನಾಗಾಲ್ಯಾಂಡ್ ರಾಜ್ಯದ ಸ್ಥಾನಮಾನ ಪಡೆದು 60 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಹೆಕಾನಿ ಜಖಾಲು - ಸಲ್ಹೌಟುವೊ ಕ್ರೂಸ್
ಹೆಕಾನಿ ಜಖಾಲು - ಸಲ್ಹೌಟುವೊ ಕ್ರೂಸ್

ಗುವಾಹಟಿ: ನಾಗಾಲ್ಯಾಂಡ್ ರಾಜ್ಯದ ಸ್ಥಾನಮಾನ ಪಡೆದು 60 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಸಮಾಜ ಸೇವಕಿಯಾಗಿರುವ ಹೆಕಾನಿ ಜಖಾಲು ಮತ್ತು ಸಲ್ಹೌಟುವೊ ಕ್ರೂಸ್ ಅವರು ನಾಗಾಲ್ಯಾಂಡ್ ವಿಧಾನಸಭೆಗೆ ಆಯ್ಕೆಯಾದ ಮೊದಲ ಮಹಿಳೆಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಬ್ಬರೂ ಆಡಳಿತಾರೂಢ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ(ಎನ್‌ಡಿಪಿಪಿ)ಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದಾರೆ. ಒಟ್ಟು 183 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳೆಯರು ಮಾತ್ರ ಚುನಾವಣಾ ಕಣದಲ್ಲಿದ್ದರು.

ವೃತ್ತಿಯಲ್ಲಿ ವಕೀಲೆಯಾಗಿರುವ ಜಖಾಲು ಅವರು ದಿಮಾಪುರ್ III ಕ್ಷೇತ್ರದಲ್ಲಿ ಲೋಕ ಜನಶಕ್ತಿ ಪಕ್ಷದ(ರಾಮ್ ವಿಲಾಸ್) ಅಝೆಟೊ ಝಿಮೊಮಿ ಅವರ ವಿರುದ್ಧ 1,536 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇನ್ನು ಕೊಹಿಮಾ ಜಿಲ್ಲೆಯ ಪಶ್ಚಿಮ ಅಂಗಮಿ ಕ್ಷೇತ್ರದಿಂದ ಕ್ರೂಸ್ ಅವರು ಗೆದ್ದಿದ್ದಾರೆ. ಅವರು ಕೇವಲ ಏಳು ಮತಗಳಿಂದ ಪಕ್ಷೇತರ ಅಭ್ಯರ್ಥಿ ಕೆನೆಝಖೋ ನಖ್ರೋ ಅವರನ್ನು ಸೋಲಿಸಿದ್ದಾರೆ.

ಗೆಲುವಿನ ಬಳಿಕ ಮಾತನಾಡಿದ ಕ್ರೂಸ್, "ನಾನು ನನ್ನ ಕ್ಷೇತ್ರದಲ್ಲಿ ಬದಲಾವಣೆ ತರಲು ಬಯಸುತ್ತೇನೆ. ನಿರ್ಧಾರ ತೆಗೆದುಕೊಳ್ಳುವ ಕ್ಷೇತ್ರಗಳಲ್ಲಿ ಮಹಿಳೆಯರ ಅಗತ್ಯ ಇದೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com