ತ್ರಿಪುರಾ: ಸರ್ಕಾರ ರಚನೆಗೆ ಹಕ್ಕು ಮಂಡಿಸದ ಮಾಣಿಕ್ ಸಹಾ, ಸಿಎಂ ಸ್ಥಾನಕ್ಕೆ ರಾಜೀನಾಮೆ!
ತ್ರಿಪುರಾ ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸಹಾ ಅವರಿಂದು ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ಭೇಟಿಯಾಗಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
Published: 03rd March 2023 04:19 PM | Last Updated: 03rd March 2023 07:12 PM | A+A A-

ಮಾಣಿಕ್ ಸಹಾ
ಅಗರ್ತಲಾ: ತ್ರಿಪುರಾ ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸಹಾ ಅವರಿಂದು ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ಭೇಟಿಯಾಗಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಮುಂದಿನ ಸರ್ಕಾರ ರಚನೆಗೆ ಮಾಣಿಕ್ ಸಹಾ ಹಕ್ಕು ಮಂಡಿಸದ ಹಿನ್ನೆಲೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ಅದರ ಮಿತ್ರ ಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಕ್ರಮವಾಗಿ 32 ಸ್ಥಾನ ಮತ್ತು ಒಂದು ಕ್ಷೇತ್ರವನ್ನು ಗೆದ್ದು, ಸತತ ಎರಡನೇ ಅವಧಿಗೆ ಈಶಾನ್ಯ ರಾಜ್ಯದಲ್ಲಿ ಅಧಿಕಾರಕ್ಕೆ ಮರಳುತ್ತಿದೆ.
ರಾಜಭವನದಿಂದ ಹೊರಗೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಣಿಕ್ ಸಹಾ, ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ನೂತನ ಸರ್ಕಾರ ರಚನೆಯಾಗುವವರೆಗೂ ಮುಂದುವರೆಯುವಂತೆ ರಾಜ್ಯಪಾಲರು ಸೂಚಿಸಿರುವುದಾಗಿ ಹೇಳಿದರು. ಮಾರ್ಚ್ 8 ರಂದು ನೂತನ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಈಶಾನ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ; ಸಿಎಂ ಹಿಮಂತ ಬಿಸ್ವಾ ಶರ್ಮಾ 'ಡೀಲ್ ಮಾಸ್ಟರ್'!
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸರ್ಕಾರ ರಚನೆಗೆ ತಾನು ಹಕ್ಕು ಮಂಡಿಸಲಿಲ್ಲ ಎಂದು ಅವರು ಹೇಳಿದರು. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಹೆಸರನ್ನು ನಿರ್ಧರಿಸಲಾಗುವುದು, ಶಾಸಕಾಂಗ ಪಕ್ಷದ ಸಭೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಬಿಜೆಪಿ ಮುಖ್ಯ ವಕ್ತಾರ ಸುಬ್ರತಾ ಚಕ್ರವರ್ತಿ ತಿಳಿಸಿದರು.