ಅದಾನಿ ಕಂಪನಿಗಳಿಂದ 10,000 ಕೋಟಿ ರೂ. ಹಗರಣ: ಎಎಪಿ ಆರೋಪ
ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಲ್ಲಿ ಅದಾನಿ ಎಂಟರ್‌ಪ್ರೈಸ್ ಲಿಮಿಟೆಡ್ 10,000 ಕೋಟಿ ರೂ. ಮೊತ್ತದ ಹಗರಣ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ಶನಿವಾರ ಆರೋಪಿಸಿದೆ ಮತ್ತು ಈ ಬಗ್ಗೆ ಕೇಂದ್ರ ಏಜೆನ್ಸಿಗಳಿಂದ ತನಿಖೆಗೆ ಒತ್ತಾಯಿಸಿದೆ.
Published: 18th March 2023 09:12 PM | Last Updated: 18th March 2023 09:14 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಲ್ಲಿ ಅದಾನಿ ಎಂಟರ್‌ಪ್ರೈಸ್ ಲಿಮಿಟೆಡ್ 10,000 ಕೋಟಿ ರೂ. ಮೊತ್ತದ ಹಗರಣ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ಶನಿವಾರ ಆರೋಪಿಸಿದೆ ಮತ್ತು ಈ ಬಗ್ಗೆ ಕೇಂದ್ರ ಏಜೆನ್ಸಿಗಳಿಂದ ತನಿಖೆಗೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯ್ನುದ್ದೇಶಿಸಿ ಮಾತನಾಡಿದ ಎಎಪಿ ವಕ್ತಾರ ಸಂಜಯ್ ಸಿಂಗ್, ವಿದ್ಯುತ್ ಉತ್ಪಾದನೆ ಮತ್ತು ಕಾರ್ಯಾಚರಣೆಗೆ ಮಹಾರಾಷ್ಟ್ರ ಸರ್ಕಾರದಿಂದ ಹಣ ಪಡೆದಿರುವ ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್, ಲಾಭವನ್ನು ಜೇಬಿಗೆ ಹಾಕಿಕೊಂಡಿದೆ. ಈ ಹಗರಣದಲ್ಲಿ ಲೂಟಿ ಮಾಡಿದ ಹಣದಿಂದ ದೆಹಲಿಗೆ ಮೂರು ವರ್ಷ ಉಚಿತ ವಿದ್ಯುತ್ ನೀಡಬಹುದು. ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಸಂಪನ್ಮೂಲ ಕೊರತೆ ದುಬಾರಿ ವಿದ್ಯುತ್‌ಗೆ ಕಾರಣವಲ್ಲ. ಅದಾನಿಯವರ ಘೋರ ಭ್ರಷ್ಟಾಚಾರವೇ ಕಾರಣ ಎಂದರು.
2014ಕ್ಕಿಂತ ಮೊದಲು ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ವಿದ್ಯುತ್ ಕ್ಷೇತ್ರ ಪ್ರವೇಶಿಸಿದ ಅದಾನಿಯ ಆರು ಕಂಪನಿಗಳು ವಿದ್ಯುತ್ ಉತ್ಪಾದನೆ ಸೇರಿದಂತೆ ಕಾರ್ಯಾಚರಣೆಗೆ ತಗಲುವ ವೆಚ್ಚದ ಹಣವನ್ನು ಸರ್ಕಾರದಿಂದ ಪಡೆಯುತ್ತಿದ್ದರಲ್ಲದೇ, ಲಾಭವನ್ನೂ ಕೂಡಾ ಅವರ ಜೀಬಿಗೆ ಹಾಕಿಕೊಳ್ಳುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ, ಅದಾನಿ ತನ್ನ ಸಹೋದರ ವಿನೋದ್ ಅದಾನಿಯ ನಕಲಿ ಕಂಪನಿಯಿಂದ ಚೀನಾದಿಂದ ಅಗ್ಗದ ಯಂತ್ರಗಳನ್ನು ಹೆಚ್ಚಿನ ಬೆಲೆಗೆ ತರಿಸಿಕೊಳ್ಳುತ್ತಿದ್ದರು. ಯಂತ್ರೋಪಕರಣಗಳಿಗಾಗಿ ಹಣವನ್ನು ಮಹಾರಾಷ್ಟ್ರ ಸರ್ಕಾರದಿಂದ ಪಡೆದಿದ್ದರು ಎಂದು ಅವರು ಆರೋಪಿಸಿದರು.
ಕಂದಾಯ ಗುಪ್ತಚರ ನಿರ್ದೇಶನಾಲಯದಿಂದ ಈ ವಿಷಯ ಬೆಳಕಿಗೆ ಬಂದಿದೆ. ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕಾರಣ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಂಗ್ ಹೇಳಿದರು.