2024 ಲೋಕಸಭಾ ಚುನಾವಣೆ: ಕಾಂಗ್ರೆಸ್ ಇಲ್ಲದ ವಿಪಕ್ಷಗಳ ಮೈತ್ರಿಕೂಟಕ್ಕೆ ಬಿಜೆಪಿ ಎದುರಿಸಲು ಸಾಧ್ಯವಿಲ್ಲ- ಜೈರಾಮ್ ರಮೇಶ್
ಕಾಂಗ್ರೆಸ್ ಇಲ್ಲದೆ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಬಿಜೆಪಿ ಎದುರಿಸಲು ಸಾಧ್ಯವಿಲ್ಲ ಮತ್ತು 2024ರ ಲೋಕಸಭಾ ಚುನಾವಣೆಗೆ ಒಕ್ಕೂಟ ರಚನೆಯಾದರೆ, ಅದರಲ್ಲಿ ಪಕ್ಷವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
Published: 19th March 2023 07:29 PM | Last Updated: 19th March 2023 07:35 PM | A+A A-

ರಾಹುಲ್ ಗಾಂಧಿ ಅವರೊಂದಿಗೆ ಜೈರಾಮ್ ರಮೇಶ್ ಇರುವ ಸಾಂದರ್ಭಿಕ ಚಿತ್ರ
ನವದೆಹಲಿ: ಕಾಂಗ್ರೆಸ್ ಇಲ್ಲದೆ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಬಿಜೆಪಿ ಎದುರಿಸಲು ಸಾಧ್ಯವಿಲ್ಲ ಮತ್ತು 2024ರ ಲೋಕಸಭಾ ಚುನಾವಣೆಗೆ ಒಕ್ಕೂಟ ರಚನೆಯಾದರೆ, ಅದರಲ್ಲಿ ಪಕ್ಷವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಕರ್ನಾಟಕ ಮತ್ತಿತರ ರಾಜ್ಯಗಳಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಪಕ್ಷ ಮೊದಲ ಆದ್ಯತೆ ನೀಡಲಿದೆ ಎಂದು ಅವರು ಪಿಟಿಐ ಸಂದರ್ಶನದಲ್ಲಿ ತಿಳಿಸಿದ್ದಾರೆ. 2024 ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ದೂರವಿದ್ದು, ಪ್ರಾದೇಶಿಕ ಪಕ್ಷಗಳೊಂದಿಗೆ ಸಾಧ್ಯವಾದರೆ ಮಾತುಕತೆ ನಡೆಸುವುದಾಗಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಹೇಳಿಕೆ ನೀಡಿದ ಬೆನ್ನಲ್ಲೇ ಜೈರಾಮ್ ರಮೇಶ್ ಈ ರೀತಿ ಹೇಳಿದ್ದಾರೆ.
ಇದನ್ನೂ ಓದಿ: ರಾಹುಲ್ ಮನೆ ಬಾಗಿಲಿಗೆ ದೆಹಲಿ ಪೊಲೀಸರು: 'ಕೀಳುಮಟ್ಟದ ನಡವಳಿಕೆ' ಎಂದ ಕಾಂಗ್ರೆಸ್, ವಿವರ ನೀಡಲು ಸಮಯಾವಕಾಶ ಕೇಳಿದ ಗಾಂಧಿ!
ಟಿಎಂಸಿ ಮತ್ತು ಎಸ್ ಪಿ ನಡೆ ವಿಪಕ್ಷಗಳ ಒಗ್ಗಟ್ಟಿಗೆ ಧಕ್ಕೆ ತರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜೈರಾಮ್ ರಮೇಶ್, ಟಿಎಂಸಿ, ಎಸ್ ಪಿ ನಾಯಕರು ಸಭೆ ನಡೆಸುತ್ತಿದ್ದಾರೆ. ತೃತೀಯ ರಂಗ, ನಾಲ್ಕನೇ ರಂಗ ರಚನೆಯಾಗುತ್ತಲೇ ಇರುತ್ತದೆ. ಆದರೆ, ವಿಪಕ್ಷದಲ್ಲಿ ಕಾಂಗ್ರೆಸ್ ಇರುವುದು ಅಗತ್ಯವಾಗಿದೆ. ಒಂದು ವೇಳೆ ವಿಪಕ್ಷಗಳ ಮೈತ್ರಿಕೂಟ ರಚನೆಯಾದರೆ, ಅದರಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಲಿದೆ. ಕಾಂಗ್ರೆಸ್ ಇಲ್ಲದ ವಿಪಕ್ಷಗಳ ಮೈತ್ರಿಕೂಟ ಅಸಾಧ್ಯ ಎಂದರು.