ಆಂಧ್ರ ಪ್ರದೇಶ: ಅಸೆಂಬ್ಲಿಯಲ್ಲಿ ಕೋಲಾಹಲ, ಕೈ ಕೈ ಮಿಲಾಯಿಸಿದ ವೈಎಸ್ ಆರ್ ಸಿಪಿ, ಟಿಡಿಪಿ ಶಾಸಕರು
ಆಂಧ್ರ ಪ್ರದೇಶ ಅಸೆಂಬ್ಲಿಯಲ್ಲಿ ಸೋಮವಾರ ವೈಎಸ್ ಆರ್ ಕಾಂಗ್ರೆಸ್ ಮತ್ತು ಟಿಡಿಪಿ ಶಾಸಕರ ನಡುವೆ ಘರ್ಷಣೆ ನಡೆದು ಕೋಲಾಹಲದ ಸನ್ನಿವೇಶವೇರ್ಪಟ್ಟಿತು.
Published: 20th March 2023 02:30 PM | Last Updated: 20th March 2023 02:34 PM | A+A A-

ಸ್ಪೀಕರ್ ಪೀಠದ ಬಳಿ ಪ್ರತಿಭಟನೆ ನಡೆಸುತ್ತಿರುವ ಟಿಡಿಪಿ ಶಾಸಕರು
ಅಮರಾವತಿ: ಆಂಧ್ರ ಪ್ರದೇಶ ಅಸೆಂಬ್ಲಿಯಲ್ಲಿ ಸೋಮವಾರ ವೈಎಸ್ ಆರ್ ಕಾಂಗ್ರೆಸ್ ಮತ್ತು ಟಿಡಿಪಿ ಶಾಸಕರ ನಡುವೆ ಘರ್ಷಣೆ ನಡೆದು ಕೋಲಾಹಲದ ಸನ್ನಿವೇಶವೇರ್ಪಟ್ಟಿತು. ಟಿಡಿಪಿ ಸದಸ್ಯರು ಘೋಷಣೆ ಕೂಗುತ್ತಾ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಬಳಿಗೆ ತೆರಳಿ ಪ್ರತಿಭಟನೆ ತೀವ್ರಗೊಳಿಸಿದಾಗ, ವೈಎಸ್ ಆರ್ ಪಿ ಸದಸ್ಯರು ಕೂಡಾ ಸ್ಪೀಕರ್ ಪೀಠದ ಬಳಿ ತೆರಳಿದರು. ಆಗ ಘರ್ಷಣೆಯ ಪರಿಸ್ಥಿತಿ ಉಂಟಾಯಿತು.
ಉದ್ರಿಕ್ತ ಟಿಡಿಪಿ ಸದಸ್ಯರಿಂದ ಸ್ಪೀಕರ್ ಅವರನ್ನು ರಕ್ಷಿಸುವ ಯತ್ನದಲ್ಲಿ ವೈಎಸ್ ಆರ್ ಸಿಪಿ ಸದಸ್ಯರು ಅಲ್ಲಿಂದ ಕೆಲವರು ಟಿಪಿಡಿ ಶಾಸಕರನ್ನು ತಳ್ಳಿದ್ದಾರೆ. ಇದರಿಂದ ಆಕ್ರೋಶಗೊಂಡ ಟಿಡಿಪಿ ಸದಸ್ಯರು, ವೈಎಸ್ ಆರ್ ಪಿಸಿ ಶಾಸಕರೊಂದಿಗೆ ಕೈ ಕೈ ಮಿಲಾಯಿಸಿದ್ದಾರೆ. ಪರಿಣಾಮ ಸದನ ರಣಾಂಗಣವಾಗಿ ಮಾರ್ಪಟ್ಟಿತು.
ಈ ಉದ್ರಿಕ್ತ ಪರಿಸ್ಥಿತಿಯ ನಡುವೆ ಟಿಡಿಪಿ ಸದಸ್ಯರನ್ನು ಒಂದು ದಿನದ ಮಟ್ಟಿಗೆ ಸದನದಿಂದ ಸ್ಪೀಕರ್ ಅಮಾನತುಗೊಳಿಸಿದ್ದಾರೆ. ಈ ಮಧ್ಯೆ ದಲಿತ ಮುಖಂಡರ ಮೇಲೆ ವೈಎಸ್ ಆರ್ ಸಿಪಿ ಶಾಸಕರು ಹಲ್ಲೆ ನಡೆಸಿದ್ದಾರೆ ಎಂದು ಟಿಡಿಪಿ ಸದಸ್ಯರು ಆರೋಪಿಸಿದ್ದಾರೆ. ಟಿಡಿಪಿ ಶಾಸಕರ ವರ್ತನೆಯನ್ನು ವೈಎಸ್ ಆರ್ ಸಿ ಶಾಸಕರು ತೀವ್ರವಾಗಿ ಖಂಡಿಸಿದ್ದಾರೆ.