ಲೋಕಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ 45 ಲಕ್ಷ ಕೋಟಿ ರೂ. ಬಜೆಟ್ ಅಂಗೀಕಾರ

ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಜೆಪಿಸಿ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷಗಳು ಗದ್ದಲ ಮುಂದುವರೆಸಿದ್ದರಿಂದ ಯಾವುದೇ ಚರ್ಚೆಯಿಲ್ಲದೆ 2023-24ನೇ ಸಾಲಿನ, ಸುಮಾರು 45 ಲಕ್ಷ ಕೋಟಿ ರೂಪಾಯಿ...
ಸಂಸತ್ ಬಜೆಟ್ ಅಧಿವೇಶನ
ಸಂಸತ್ ಬಜೆಟ್ ಅಧಿವೇಶನ

ನವದೆಹಲಿ: ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಜೆಪಿಸಿ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷಗಳು ಗದ್ದಲ ಮುಂದುವರೆಸಿದ್ದರಿಂದ ಯಾವುದೇ ಚರ್ಚೆಯಿಲ್ಲದೆ 2023-24ನೇ ಸಾಲಿನ, ಸುಮಾರು 45 ಲಕ್ಷ ಕೋಟಿ ರೂಪಾಯಿ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಗುರುವಾರ ಅಂಗೀಕರಿಸಲಾಯಿತು.

ರಾಹುಲ್ ಗಾಂಧಿಯವರ ಕ್ಷಮೆಯಾಚನೆ ಮತ್ತು ಅದಾನಿ ಪ್ರಕರಣದ ಕುರಿತು ಚರ್ಚೆಗೆ ಬೇಡಿಕೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷದ ಸಂಸದರು ತೀವ್ರ ವಾಗ್ವಾದದಲ್ಲಿ ತೊಡಗಿದ್ದರಿಂದ ಲೋಕಸಭೆಯನ್ನು ಎರಡು ಬಾರಿ ಮುಂದೂಡಲಾಯಿತು.

ಉಭಯ ಪಕ್ಷಗಳ ಪ್ರತಿಭಟನೆಯಿಂದಾಗಿ ಬಜೆಟ್ ಅಧಿವೇಶನದ ಎರಡನೇ ಹಂತದ ಬಹುತೇಕ ಕಲಾಪಗಳು ರದ್ದಾಗಿದ್ದು, ಇಂದು ಯಾವುದೇ ಚರ್ಚೆಯಿಲ್ಲದೆ ಏಪ್ರಿಲ್ 1 ರಿಂದ ಜಾರಿಗೆ ಬರುವ ಬಜೆಟ್ ಅನ್ನು ಕೆಲವೇ ನಿಮಿಷಿಗಳಲ್ಲಿ ಅಂಗೀಕರಿಸಲಾಯಿತು.

ಎರಡು ಮುಂದೂಡಿಕೆಗಳ ನಂತರ ಇಂದು ಸಂಜೆ 6 ಗಂಟೆಗೆ ಲೋಕಸಭೆ ಕಲಾಪ ಪುನಃ ಆರಂಭವಾದ ಕೂಡಲೇ, ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಪಕ್ಷಗಳ ಕಟ್ ಮೋಷನ್ ಅಥವಾ ಸರ್ಕಾರದ ಖರ್ಚು ಯೋಜನೆಗೆ ತಿದ್ದುಪಡಿಗಳನ್ನು ಮತಕ್ಕೆ ಹಾಕಿದರು ಮತ್ತು ಅದನ್ನು ಧ್ವನಿ ಮತದಿಂದ ತಿರಸ್ಕರಿಸಲಾಯಿತು.

ನಂತರ ವಿತ್ತ ಸಚಿವೆ ನಿರ್ಮಲಾ ಸೀತಾರ್ಮನ್ ಅವರು 2023-24ನೇ ಸಾಲಿನ ಅನುದಾನಕ್ಕಾಗಿ ಚರ್ಚೆ ಮತ್ತು ಮತದಾನಕ್ಕೆ ಸಂಬಂಧಿಸಿದ ಹಣಕಾಸು ಮಸೂದೆಯನ್ನು ಮಂಡಿಸಿದರು.

ಈ ವೇಳೆ ವಿರೋಧ ಪಕ್ಷದ ಸಂಸದರು ಸದನದ ಬಾವಿಗೆ ನುಗ್ಗಿ ಘೋಷಣೆಗಳನ್ನು ಕೂಗುತ್ತಿದ್ದಂತೆಯೇ ಬಜೆಟ್ ಮೇಲಿನ ಹಣಕಾಸು ಮಸೂದೆಯನ್ನು ಅಂಗೀಕರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com