'ಅಪರಾಧಿ ಎಂದು ಘೋಷಿಸುವ ಮುನ್ನ ಕೋರ್ಟ್ ಗೆ ಕ್ಷಮೆಯಾಚಿಸುವಂತೆ ರಾಹುಲ್‌ಗೆ ಗುಜರಾತ್ ನಾಯಕರ ಸಲಹೆ'
ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸುವ ಮುನ್ನ ತಮ್ಮ ಹೇಳಿಕೆಗಳಿಗೆ ಕೋರ್ಟ್ ಮುಂದೆ ಕ್ಷಮೆಯಾಚಿಸುವಂತೆ ಕಾಂಗ್ರೆಸ್ ಹಿರಿಯ ನಾಯಕರು...
Published: 24th March 2023 08:46 PM | Last Updated: 25th March 2023 04:53 PM | A+A A-

ರಾಹುಲ್ ಗಾಂಧಿ
ಅಹಮದಾಬಾದ್: ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸುವ ಮುನ್ನ ತಮ್ಮ ಹೇಳಿಕೆಗಳಿಗೆ ಕೋರ್ಟ್ ಮುಂದೆ ಕ್ಷಮೆಯಾಚಿಸುವಂತೆ ಕಾಂಗ್ರೆಸ್ ಹಿರಿಯ ನಾಯಕರು ಸಲಹೆ ನೀಡಿದ್ದರು. ಆದರೆ ರಾಹುಲ್ ಗಾಂಧಿ ತಮ್ಮ ಪಕ್ಷದ ನಾಯಕರ ಮನವಿಯನ್ನು ತಿರಸ್ಕರಿಸಿದ್ದರು.
ನ್ಯಾಯಾಲಯ ಮಾನಹಾನಿ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸುವ ಮುನ್ನ ಕೋರ್ಟ್ ಗೆ ಕ್ಷಮೆಯಾಚಿಸುವಂತೆ ಗುಜರಾತ್ ಘಟಕದ ನಾಯಕರು ರಾಹುಲ್ ಅವರ ಮನವೊಲಿಸಲು ಪ್ರಯತ್ನಿಸಿದ್ದರು ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಆದರೆ ರಾಹುಲ್ ಗಾಂಧಿ ಕ್ಷಮೆಯಾಚಿಸಲು ನಿರಾಕರಿಸಿದರು.
ರಾಹುಲ್ ಗಾಂಧಿ ತಮ್ಮ ನಿಲುವಿನಲ್ಲಿ ದೃಢವಾಗಿದ್ದರು. ನಾನು ಕ್ಷಮೆ ಯಾಚಿಸುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ನ್ಯಾಯಾಲಯ ವಿಧಿಸುವ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದರು.
ಇದನ್ನು ಓದಿ: ನಾನು ಭಾರತೀಯರ ಧ್ವನಿಗಾಗಿ ಹೋರಾಡುತ್ತಿದ್ದೇನೆ: ಲೋಕಸಭಾ ಸದಸ್ಯತ್ವ ಅನರ್ಹತೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ
"ರಾಹುಲ್ ಗಾಂಧಿ ವಿಮಾನ ನಿಲ್ದಾಣದಿಂದ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ, ಹಿರಿಯ ವಕೀಲರು ಅವರಿಗೆ ಇದು ಗಂಭೀರ ಅಪರಾಧವಲ್ಲ. ನ್ಯಾಯಾಲಯದಲ್ಲಿ ಕ್ಷಮೆಯಾಚಿಸಿದರೆ ಸಾಕು. ನ್ಯಾಯಾಲಯ ನಿಮ್ಮನ್ನು ಕ್ಷಮಿಸಬಹುದು ಮತ್ತು ಯಾವುದೇ ಶಿಕ್ಷೆಯಾಗುವುದಿಲ್ಲ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ ರಾಹುಲ್ ಗಾಂಧಿ ಕ್ಷಮೆಯಾಚಿಸಲು ನಿರಾಕರಿಸಿದರು ಎಂದು ಸೂರತ್ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಹುಲ್ ಗಾಂಧಿ ಅವರ ಜಾಮೀನಿಗೆ ಖಾತರಿ ನೀಡಿದ್ದ ಹಸ್ಮುಖ್ ದೇಸಾಯಿ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ವಕೀಲರು ರಾಹುಲ್ ಗಾಂಧಿ ಮನವೊಲಿಸಲು ವಿಫಲವಾದ ನಂತರ, ಕೆಲವು ನಾಯಕರು ನ್ಯಾಯಾಲಯದ ಹೊರಗೆ ಅವರ ಮನವೊಲಿಸಲು ಪ್ರಯತ್ನಿಸಿದರು ಎಂದು ಹಸ್ಮುಖ್ ದೇಸಾಯಿ ಹೇಳಿದ್ದಾರೆ.