ಅದಾನಿ ಕುರಿತ ನನ್ನ ಮುಂದಿನ ಭಾಷಣಕ್ಕೆ ಪ್ರಧಾನಿ ಮೋದಿ ಹೆದರಿ ನನ್ನನ್ನು ಅನರ್ಹಗೊಳಿಸಲಾಗಿದೆ: ರಾಹುಲ್ ಗಾಂಧಿ
ನನ್ನನ್ನು ಸಂಸದ ಸ್ಥಾನದಿಂದ ಶಾಶ್ವತವಾಗಿ ಅನರ್ಹಗೊಳಿಸಿದರೂ, ನಾನು ನನ್ನ ಹೋರಾಟವನ್ನು, ಸತ್ಯ, ನ್ಯಾಯ-ನಿಷ್ಠೆ ಪರ ಹೋರಾಟವನ್ನು ಮುಂದುವರಿಸುತ್ತೇನೆ. ನಾನು ಸಂಸತ್ತಿನ ಒಳಗೆ ಇದ್ದೇನೋ ಇಲ್ಲವೋ ಎಂಬುದು ಮುಖ್ಯವಲ್ಲ. ದೇಶಕ್ಕಾಗಿ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನರುಚ್ಛರಿಸಿದ್ದಾರೆ.
Published: 25th March 2023 01:47 PM | Last Updated: 04th April 2023 02:05 PM | A+A A-

ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ
ನವದೆಹಲಿ: ನನ್ನನ್ನು ಸಂಸದ ಸ್ಥಾನದಿಂದ ಶಾಶ್ವತವಾಗಿ ಅನರ್ಹಗೊಳಿಸಿದರೂ, ನಾನು ನನ್ನ ಹೋರಾಟವನ್ನು, ಸತ್ಯ, ನ್ಯಾಯ-ನಿಷ್ಠೆ ಪರ ಹೋರಾಟವನ್ನು ಮುಂದುವರಿಸುತ್ತೇನೆ. ನಾನು ಸಂಸತ್ತಿನ ಒಳಗೆ ಇದ್ದೇನೋ ಇಲ್ಲವೋ ಎಂಬುದು ಮುಖ್ಯವಲ್ಲ. ದೇಶಕ್ಕಾಗಿ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನರುಚ್ಛರಿಸಿದ್ದಾರೆ.
2019 ರ ಲೋಕಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕೋಲಾರದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ವೇಳೆ 'ಮೋದಿ ಉಪನಾಮ' ಹೇಳಿಕೆ ವಿಚಾರವಾಗಿ ಆಡಿದ ಮಾತಿನ ವಿರುದ್ಧ ಗುಜರಾತ್ ನ ಬಿಜೆಪಿ ಮುಖಂಡರೊಬ್ಬರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ, ಅವರನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಈ ವಿಚಾರವಾಗಿ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಅಂದು ನಾನು ಮಾಡಿರುವ ಭಾಷಣದಲ್ಲಿ ಯಾವುದೇ ನಿರ್ದಿಷ್ಟ ಜಾತಿಯನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿರಲಿಲ್ಲ. ಅದಾನಿ ಕುರಿತ ನನ್ನ ಮುಂದಿನ ಭಾಷಣಕ್ಕೆ ಪ್ರಧಾನಿ ಹೆದರಿದ್ದು, ಅವರ ಕಣ್ಣಲ್ಲಿ ಅದನ್ನು ಕಂಡಿದ್ದೇನೆ. ಅದಕ್ಕಾಗಿಯೇ, ಮೊದಲು ಗೊಂದಲಕ್ಕೀಡಾಗಿ ನಂತರ ನನ್ನನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನಾನು ಭಾರತೀಯರ ಧ್ವನಿಗಾಗಿ ಹೋರಾಡುತ್ತಿದ್ದೇನೆ: ಲೋಕಸಭಾ ಸದಸ್ಯತ್ವ ಅನರ್ಹತೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ
ಸತ್ಯವೇ ನನಗೆ ಮುಖ್ಯ: ಸತ್ಯ ಬಿಟ್ಟರೆ ನನಗೆ ಬೇರಾವುದೇ ವಿಷಯದಲ್ಲಿ ಆಸಕ್ತಿಯಿಲ್ಲ, ಸತ್ಯ ಹೇಳುವುದೇ ನನ್ನ ಕೆಲಸವಾಗಿದ್ದು, ನಾನು ಅನರ್ಹವಾಗಲಿ ಅಥವಾ ಬಂಧನಕ್ಕೊಳಗಾದರೂ ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಈ ದೇಶ ನನಗೆ ಎಲ್ಲವನ್ನೂ ಕೊಟ್ಟಿದೆ,ಹೀಗಾಗಿ ನಾನು ಇದನ್ನು ಮಾಡುತ್ತೇನೆ ಎಂದರು.
ಇಡೀ ನಾಟಕ: ಈ ವಿದ್ಯಮಾನವಿಡೀ ನಾಟಕ, ಅದಾನಿ ಶೆಲ್ ಕಂಪನಿಗಳಿಗೆ 20 ಸಾವಿರ ಕೋಟಿ ರೂಪಾಯಿ ಹೇಗೆ ಹೋಯಿತು ಎಂಬ ಸರಳ ಪ್ರಶ್ನೆಯಿಂದ ಪ್ರಧಾನಿಯನ್ನು ರಕ್ಷಿಸಲು ನಡೆಸಿರುವ ಸಂಪೂರಣ ನಾಟಕವಿದು. ಈ ಬೆದರಿಕೆ, ಅನರ್ಹತೆ ಅಥವಾ ಜೈಲು ಶಿಕ್ಷೆಗೆ ನಾನು ಹೆದರುವುದಿಲ್ಲ ಎಂದು ಗುಡುಗಿದರು.
ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಸಂಬಂಧಕ್ಕೆ ನನಗೆ ಉತ್ತರ ಸಿಗಬೇಕು: ಅದಾನಿ ಕುರಿತು ನಾನು ಒಂದೇ ಒಂದು ಪ್ರಶ್ನೆ ಕೇಳಿದ್ದು, ಪ್ರಶ್ನೆ ಕೇಳುವುದನ್ನು ನಾನು ನಿಲ್ಲಿಸುವುದಿಲ್ಲ, ದೇಶದ ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಟ ಮುಂದುವರಿಸುತ್ತೇನೆ. ಸಂಸತ್ತಿನಲ್ಲಿ ಮಾಡಿದ ನನ್ನ ಭಾಷಣವನ್ನು ತೆಗೆದುಹಾಕಲಾಯಿತು. ನಂತರ ನಾನು ಲೋಕಸಭೆ ಸ್ಪೀಕರ್‌ಗೆ ವಿವರವಾದ ಉತ್ತರವನ್ನು ಬರೆದೆ. ಕೆಲವು ಮಂತ್ರಿಗಳು ನನ್ನ ಬಗ್ಗೆ ಸುಳ್ಳು ಹೇಳಿದರು, ನಾನು ವಿದೇಶಿ ಶಕ್ತಿಗಳ ಸಹಾಯ ಪಡೆದಿದ್ದೇನೆ ಎಂದು. ಆದರೆ ನಾನು ಅಂತಹ ಯಾವುದೇ ಕೆಲಸ ಮಾಡಿಲ್ಲ. ನಾನು ಪ್ರಶ್ನೆ ಕೇಳುವುದನ್ನು ನಿಲ್ಲಿಸುವುದಿಲ್ಲ, ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧವನ್ನು ಪ್ರಶ್ನಿಸುತ್ತಲೇ ಇರುತ್ತೇನೆ ಎಂದರು.
ಇದನ್ನೂ ಓದಿ: ಮೋದಿ ಸಮುದಾಯದ ಅವಹೇಳನ, ಜೈಲು ಶಿಕ್ಷೆ; ರಾಹುಲ್ ಗಾಂಧಿಗೂ ಮೊದಲು ದೋಷಿಗಳಾಗಿ ಅನರ್ಹರಾದ ಜನಪ್ರತಿನಿಧಿಗಳ ಪಟ್ಟಿ
ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ ಎಂದು ಈ ಹಿಂದೆಯೂ ಹಲವು ಬಾರಿ ಹೇಳಿದ್ದೆ. ಇಂತಹ ಉದಾಹರಣೆಗಳನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ. ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧದ ಬಗ್ಗೆ ನಾನು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದೆ ಎಂದರು.