ಪಾಕಿಸ್ತಾನದಲ್ಲಿನ ಮಂದಿಗೆ ಅತೃಪ್ತಿ, ದೇಶ ವಿಭಜನೆಯಾಗಿದ್ದು ತಪ್ಪು ಎಂದು ಅವರಿಗೂ ಅನ್ನಿಸುತ್ತಿದೆ: ಮೋಹನ್ ಭಾಗ್ವತ್
ಭೋಪಾಲ್: ಸ್ವಾತಂತ್ರ್ಯ ಪಡೆದು 7 ದಶಕಗಳೇ ಕಳೆದಿದ್ದರೂ, ಪಾಕಿಸ್ತಾನದಲ್ಲಿನ ಮಂದಿ ಅತೃಪ್ತಿ ಹೊಂದಿದ್ದಾರೆ. ದೇಶ ವಿಭಜನೆಯಾಗಿದ್ದು ತಪ್ಪು ಎಂಬ ಅಭಿಪ್ರಾಯ ಅವರಲ್ಲೂ ಇದೆ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
ಭೋಪಾಲ್ ನಲ್ಲಿ ನಡೆದ ಕ್ರಾಂತಿಕಾರಿ ಹೇಮು ಕಲಾನಿ ಅವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಮೋಹನ್ ಭಾಗ್ವತ್ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಪ್ರದೇಶಗಳಿಂದ ಸಿಂಧಿಗಳು ಭಾಗಿಯಾಗಿದ್ದರು.
1947 ಕ್ಕೂ ಮುನ್ನ ದೇಶ ಇಬ್ಭಾಗವಾಗುವುದಕ್ಕೂ ಮುನ್ನ ಇದು ಭಾರತವಾಗಿತ್ತು. ದೇಶದಿಂದ ಹೊರ ಹೋದವರು ಈಗಲಾದರೂ ಶಾಂತಿಯಿಂದ ಇದ್ದಾರೆಯೇ? ಅವರಲ್ಲಿ ನೋವಿದೆ ಎಂದು ಭಾಗ್ವತ್ ಪಾಕಿಸ್ತಾನದ ಬಗ್ಗೆ ಮಾತನಾಡಿದ್ದಾರೆ.
ಉಭಯ ದೇಶಗಳ ನಡುವೆ ಈಗಿನ ಬಾಂಧವ್ಯದ ಬಗ್ಗೆ ಮಾತನಾಡಿರುವ ಮೋಹನ್ ಭಾಗ್ವತ್, ಭಾರತ ಬೇರೆಯವರ ಮೇಲೆ ದಾಳಿ ಮಾಡುವ ಸಂಸ್ಕೃತಿಗೆ ಸೇರಿದ್ದಲ್ಲ ಎಂದು ಹೇಳಿದ್ದಾರೆ.
"ಭಾರತ ಪಾಕ್ ಮೇಲೆ ದಾಳಿ ಮಾಡಬೇಕೆಂದು ನಾನು ಹೇಳುವುದಿಲ್ಲ. ಖಂಡಿತವಾಗಿ ಹೇಳುವುದಿಲ್ಲ. ನಾವು ಮತ್ತೊಬ್ಬರ ಮೇಲೆ ದಾಳಿ ನಡೆಸುವ ಸಂಸ್ಕೃತಿಗೆ ಸೇರಿದವರಲ್ಲ" ಎಂದು ಮೋಹನ್ ಭಾಗ್ವತ್ ಹೇಳಿದ್ದಾರೆ.
ನಾವು ಆತ್ಮರಕ್ಷಣೆಗಾಗಿ ತಕ್ಕ ಪ್ರತ್ಯುತ್ತರ ನೀಡುತ್ತೇವೆಯಷ್ಟೇ ಎಂದು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮೋಹನ್ ಭಾಗ್ವತ್ ಹೇಳಿದ್ದಾರೆ.
ಭಾರತದ ವಿಭಜನೆಯಾಗಿದ್ದು ತಪ್ಪು ಎಂದು ಪಾಕಿಸ್ತಾನದ ಮಂದಿ ಹೇಳುತ್ತಿದ್ದಾರೆ, ಎಲ್ಲರೂ ದೇಶವಿಭಜನೆಯಾಗಿದ್ದು ತಪ್ಪು ಎಂದು ಹೇಳುತ್ತಿದ್ದಾರೆ ಎಂದು ಭಾಗ್ವತ್ ಅಭಿಪ್ರಾಯಪಟ್ಟಿದ್ದಾರೆ. ಸಿಂಧು ಸಮುದಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಭಾಗ್ವತ್, ಸಿಂಧಿಗಳು ಸಿಂಧು ಸಂಸ್ಕೃತಿ ಮೌಲ್ಯಗಳ ಸಲುವಾಗಿ ಆ ಭಾರತದಿಂದ ಈ ಭಾರತಕ್ಕೆ ಬಂದಿದ್ದಾರೆ ಎಂದು ಭಾಗ್ವತ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ