ಶರದ್ ಪವಾರ್ ಉತ್ತರಾಧಿಕಾರಿ ನೇಮಕ ನಾಳೆ ನಿರ್ಧಾರ, ಎನ್‌ಸಿಪಿ ಅಧ್ಯಕ್ಷೆಯಾಗಿ ಸುಪ್ರಿಯಾ ಸುಳೆ ಆಯ್ಕೆ ಸಾಧ್ಯತೆ

ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ತಮ್ಮ ಉತ್ತರಾಧಿಕಾರಿ ನೇಮಕ ಸಂಬಂಧ ರಚಿಸಿರುವ ಸಮಿತಿಯು ಶುಕ್ರವಾರ ಸಭೆ ಸೇರಲಿದೆ ಎಂದು ಎನ್‌ಸಿಪಿಯ ಹಿರಿಯ ನಾಯಕರೊಬ್ಬರು ಗುರುವಾರ ತಿಳಿಸಿದ್ದಾರೆ.
ಸುಪ್ರಿಯಾ ಸುಳೆ
ಸುಪ್ರಿಯಾ ಸುಳೆ

ಮುಂಬೈ: ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ತಮ್ಮ ಉತ್ತರಾಧಿಕಾರಿ ನೇಮಕ ಸಂಬಂಧ ರಚಿಸಿರುವ ಸಮಿತಿಯು ಶುಕ್ರವಾರ ಸಭೆ ಸೇರಲಿದೆ ಎಂದು ಎನ್‌ಸಿಪಿಯ ಹಿರಿಯ ನಾಯಕರೊಬ್ಬರು ಗುರುವಾರ ತಿಳಿಸಿದ್ದಾರೆ.

ದಕ್ಷಿಣ ಮುಂಬೈನಲ್ಲಿರುವ ಪಕ್ಷದ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ಸಮಿತಿಯ ಸದಸ್ಯರಾದ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ, ಅವರ ಸೋದರಳಿಯ ಅಜಿತ್ ಪವಾರ್, ಪ್ರಫುಲ್ ಪಟೇಲ್, ಛಗನ್ ಭುಜಬಲ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ರಾಷ್ಟ್ರಮಟ್ಟದಲ್ಲಿ ಅವರ ಉತ್ತರಾಧಿಕಾರಿಯಾಗಿ ನೇಮಕವಾಗುವ ಸಾಧ್ಯತೆ ಇದೆ. ಇನ್ನು ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರಿಗೆ ರಾಜ್ಯ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.

ಈಗಾಗಲೇ ಎನ್‌ಸಿಪಿಯ ಉನ್ನತ ನಾಯಕರಾದ ಪ್ರಫುಲ್ ಪಟೇಲ್, ಸುಪ್ರಿಯಾ ಸುಳೆ, ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಏಕನಾಥ್ ಖಡ್ಸೆ, ಜಿತೇಂದ್ರ ಅಹ್ವಾದ್ ಮತ್ತು ಇತರರು ಭೇಟಿಯಾಗಿ ಮುಂದಿನ ಪಕ್ಷದ ಅಧ್ಯಕ್ಷರು ಯಾರಾಗಬಹುದು ಎಂದು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸುಪ್ರಿಯಾ ಸುಳೆ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ ಎಂದು ದಿಲೀಪ್ ವಾಲ್ಸೆ ಪಾಟೀಲ್ ಹೇಳಿದ್ದಾರೆ. ಆದರೆ ಈ ಸಂಬಂಧ ರಚನೆಯಾಗಿರುವ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಮತ್ತು ಅದಕ್ಕೆ ಶರದ್ ಪವಾರ್ ಅವರು ಒಪ್ಪಿಗೆ ನೀಡಬೇಕಾಗುತ್ತದೆ ಎಂದಿದ್ದಾರೆ.

ಸುಪ್ರಿಯಾ ಸುಳೆ ಅವರು ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಅತ್ಯುತ್ತಮ ಸಂಸದೀಯ ಪಟು ಎಂಬ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರು ಯಾವಾಗಲೂ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಹೊಂದಿದ್ದಾರೆ. ಆದರೆ ಅಜಿತ್ ಪವಾರ್ ಅವರು ಮಹಾರಾಷ್ಟ್ರದಲ್ಲಿ ಉಳಿಯಲು ಬಯಸುತ್ತಾರೆ. ಹೀಗಾಗಿ ಇಬ್ಬರಿಗೂ ಈ ವ್ಯವಸ್ಥೆ ಕೈಗೂಡಲಿದೆ' ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಳೆದ ಮಂಗಳವಾರ ಶರದ್ ಪವಾರ್ ಅವರು ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸುವ ರಾಷ್ಟ್ರ ಮತ್ತು ಮಹಾರಾಷ್ಟ್ರ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com