'ದಿ ಕೇರಳ ಸ್ಟೋರಿ' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮಧ್ಯ ಪ್ರದೇಶ ಸರ್ಕಾರ
ಮಧ್ಯ ಪ್ರದೇಶದಲ್ಲಿ ದಿ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶನಿವಾರ ಘೋಷಿಸಿದ್ದಾರೆ.
Published: 06th May 2023 01:36 PM | Last Updated: 06th May 2023 04:09 PM | A+A A-

ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್
ಭೋಪಾಲ್: ಮಧ್ಯ ಪ್ರದೇಶದಲ್ಲಿ ದಿ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶನಿವಾರ ಘೋಷಿಸಿದ್ದಾರೆ.
"ನಾವು ಈಗಾಗಲೇ ಮಧ್ಯಪ್ರದೇಶದಲ್ಲಿ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ಜಾರಿ ಮಾಡಿದ್ದೇವೆ. ಈ ಚಿತ್ರವು ಜಾಗೃತಿ ಮೂಡಿಸುತ್ತದೆ. ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಬೇಕು. ಪೋಷಕರು, ಮಕ್ಕಳು ಮತ್ತು ಹೆಣ್ಣುಮಕ್ಕಳು ಇದನ್ನು ನೋಡಬೇಕು. ಅದಕ್ಕಾಗಿಯೇ ಮಧ್ಯಪ್ರದೇಶ ಸರ್ಕಾರ ದಿ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸುತ್ತಿದೆ" ಎಂದು ಚೌಹಾಣ್ ಹೇಳಿದ್ದಾರೆ.
'ಲವ್ ಜಿಹಾದ್', ಧಾರ್ಮಿಕ ಮತಾಂತರ ಮತ್ತು ಭಯೋತ್ಪಾದನೆಯ ಪಿತೂರಿಗಳು ಮತ್ತು ಅದರ "ಭೀಕರ" ಮುಖವನ್ನು ಈ ಚಿತ್ರ ಬಹಿರಂಗಪಡಿಸುತ್ತದೆ ಎಂದು ಮಧ್ಯ ಪ್ರದೇಶ ಸಿಎಂ ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ಪ್ರಧಾನಿ ಮೋದಿ ಅವರು ನಿನ್ನೆ ಬಳ್ಳಾರಿಯಲ್ಲಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ದಿ ಕೇರಳ ಸ್ಟೋರಿ' ಚಿತ್ರ ಭಯೋತ್ಪಾದನೆಯ ಸಂಚು ಆಧರಿಸಿದ್ದು, ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.