ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸುತ್ತಿರುವುದೇಕೆ?: 19 ವಿಪಕ್ಷಗಳು ನೀಡಿರುವ ವಿವರಣೆ ಹೀಗಿದೆ...
ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ ಸೇರಿದಂತೆ 19 ವಿಪಕ್ಷಗಳು ಮೇ.28 ರಂದು ನಡೆಯಲಿರುವ ನೂತನ ಸಂಸತ್ ಭವನ ಉದ್ಘಾಟನೆಯ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ.
Published: 24th May 2023 12:57 PM | Last Updated: 24th May 2023 01:04 PM | A+A A-

ಸೆಂಟ್ರಲ್ ದೆಹಲಿಯಲ್ಲಿರುವ ನೂತನ ಸಂಸತ್ ಭವನ
ನವದೆಹಲಿ: ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ ಸೇರಿದಂತೆ 19 ವಿಪಕ್ಷಗಳು ಮೇ.28 ರಂದು ನಡೆಯಲಿರುವ ನೂತನ ಸಂಸತ್ ಭವನ ಉದ್ಘಾಟನೆಯ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ.
ಪ್ರಧಾನಿ ಮೋದಿ ನೂತನ ಸಂಸತ್ ಭವನವನ್ನು ಉದ್ಘಾಟನೆ ಮಾಡಲಿದ್ದು, ರಾಷ್ಟ್ರಪತಿಗಳು ಸಂಸತ್ ಭವನವನ್ನು ಉದ್ಘಾಟನೆ ಮಾಡದೇ ಇರುವುದನ್ನು ವಿಪಕ್ಷಗಳು ರಾಷ್ಟ್ರಪತಿಗಳ ಹುದ್ದೆಗೆ ಮಾಡಿದ ಅವಮಾನ ಎಂದು ಆರೋಪಿಸಿವೆ.
ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿರುವುದರ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ವಿಪಕ್ಷಗಳು ನೂತನ ಸಂಸತ್ ಕಟ್ಟಡ ಉದ್ಘಾಟನೆ ಒಂದು ಮಹತ್ವದ ಸಂದರ್ಭವಾಗಿದೆ ಆದರೆ ಸರ್ಕಾರ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುತ್ತಿದೆ ಎಂಬ ನಮ್ಮ ನಂಬಿಕೆ ಹಾಗೂ ಹೊಸ ಸಂಸತ್ತನ್ನು ನಿರ್ಮಿಸಿದ "ನಿರಂಕುಶ ವಿಧಾನ" ದ ಬಗ್ಗೆ ನಮ್ಮ ಅಸಮ್ಮತಿ ಹೊರತಾಗಿಯೂ ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಈ ಸಂದರ್ಭವನ್ನು ಗುರುತಿಸಲು ನಾವು ಮುಕ್ತರಾಗಿದ್ದೇವೆ.
ಇದನ್ನೂ ಓದಿ: ಟಿಎಂಸಿ, ಎಎಪಿ ಬಳಿಕ ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಿದ ಆರ್‌ಜೆಡಿ
ಆದರೆ ಪ್ರಧಾನಿ ಮೋದಿ ಅವರು ಸ್ವತಃ ಸಂಸತ್ ಭವನವನ್ನು ಉದ್ಘಾಟಿಸುವ ನಿರ್ಧಾರ ತೆಗೆದುಕೊಂಡು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಮಾಡಿರುವ ದೊಡ್ಡ ಅವಮಾನವಷ್ಟೇ ಅಲ್ಲದೇ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದ್ದು, ಇದು ಸೂಕ್ತವಾದ ಪ್ರತಿಕ್ರಿಯೆಯನ್ನು ಬಯಸುತ್ತದೆ, ಆದ್ದರಿಂದ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ವಿಪಕ್ಷಗಳು ಹೇಳಿವೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಜನತಾ ದಳ (ಯುನೈಟೆಡ್), ಎಎಪಿ, ಸಿಪಿಐ-ಎಂ, ಸಿಪಿಐ, ಎಸ್‌ಪಿ, ಎನ್‌ಸಿಪಿ, ಎಸ್‌ಎಸ್ (ಯುಬಿಟಿ), ಆರ್‌ಜೆಡಿ, ಐಯುಎಂಎಲ್, ಜೆಎಂಎಂ, ಎನ್‌ಸಿ, ಕೆಸಿ (ಎಂ), ಆರ್‌ಎಸ್‌ಪಿ, ವಿಸಿಕೆ, ಎಂಡಿಎಂಕೆ, ಆರ್‌ಎಲ್‌ಡಿ ಜಂಟಿ ಹೇಳಿಕೆಗೆ ಸಹಿ ಹಾಕಿವೆ.