ನೂತನ ಸಂಸತ್ ಭವನ: ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ- ಹೆಚ್.ಡಿ. ದೇವೇಗೌಡ
ಮೇ 28 ರಂದು ನಡೆಯಲಿರುವ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಗುರುವಾರ ಹೇಳಿದ್ದಾರೆ.
Published: 25th May 2023 08:52 PM | Last Updated: 25th May 2023 09:00 PM | A+A A-

ಹೆಚ್ ಡಿ ದೇವೇಗೌಡ
ನವದೆಹಲಿ: ಮೇ 28 ರಂದು ನಡೆಯಲಿರುವ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಗುರುವಾರ ಹೇಳಿದ್ದು, ನೂತನ ಕಟ್ಟಡ ದೇಶದ ಆಸ್ತಿಯಾಗಿದ್ದು, ತೆರಿಗೆದಾರರ ಹಣದಿಂದ ಕಟ್ಟಲಾಗಿದೆ ಎಂದಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಲು ಅದೇನೂ ಬಿಜೆಪಿ ಅಥವಾ ಆರ್ ಎಸ್ ಎಸ್ ಕಚೇರಿಯೇ ಎಂದು ಪ್ರಶ್ನಿಸಿದ ದೇವೇಗೌಡ, ನಾನು ಪಾಲ್ಗೊಳ್ಳುತ್ತಿದ್ದೇನೆ. ಇದು ದೇಶದ ಆಸ್ತಿ. ಯಾರ ವೈಯಕ್ತಿಕ ವಿಚಾರವೂ ಅಲ್ಲ ಎಂದು ಹೇಳಿದರು.
ಇದನ್ನೂ ಓದಿ: ನೂತನ ಸಂಸತ್ ಭವನ: ಉದ್ಘಾಟನೆಯಲ್ಲಿ ಭಾಗಿಯಾಗಿ 'ಹೃದಯ ವೈಶಾಲ್ಯತೆ' ತೋರಿ: ಪ್ರತಿಪಕ್ಷಗಳಿಗೆ ಬಿಜೆಪಿ ಮನವಿ
ಜೆಡಿಎಸ್ ಆತ್ಮಾವಲೋಕನಾ ಸಭೆಯಲ್ಲಿ ಮಾತನಾಡಿದ ದೇವೇಗೌಡರು, ಇದು ಯಾರ ವೈಯಕ್ತಿಕ ಕಾರ್ಯಕ್ರಮವಲ್ಲಾ, ಇದು ದೇಶದ ಕಾರ್ಯಕ್ರಮ. ದೇಶದ ಜನರ ತೆರಿಗೆ ಹಣದಿಂದ ಭವ್ಯ ಕಟ್ಟಡ ನಿರ್ಮಾಣವಾಗಿದೆ. ಇದು ದೇಶಕ್ಕೆ ಸೇರಿದ್ದು, ಬಿಜೆಪಿ ಅಥವಾ ಆರ್‌ಎಸ್‌ಎಸ್ ಕಚೇರಿ ಅಲ್ಲ ಎಂದರು.
ರಾಜಕೀಯವಾಗಿ ಬಿಜೆಪಿಯನ್ನು ವಿರೋಧಿಸಲು ಹಲವು ಕಾರಣಗಳಿವೆ ಸಂಸತ್ ಭವನ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಮಾಡುವುದು ನನಗೆ ಇಷ್ಟವಿಲ್ಲ ಎಂದು ಅಧಿಕೃತ ಪ್ರಕಟಣೆಯಲ್ಲಿ ದೇವೇಗೌಡರು ತಿಳಿಸಿದ್ದಾರೆ.
ನಾನು ಸಂಸತ್ತಿನ ಉಭಯ ಸದನಗಳಿಗೆ ಚುನಾಯಿತನಾಗಿದ್ದು, ಸಾಂವಿಧಾನಿಕ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಈಗಲೂ ರಾಜ್ಯಸಭಾ ಸದಸ್ಯನಾಗಿದ್ದು, ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡಲು ಕೆಲಸ ಮಾಡುತ್ತೇನೆ. ಹಾಗಾಗೀ ಸಂವಿಧಾನದ ವಿಚಾರದಲ್ಲಿ ರಾಜಕೀಯವನ್ನು ತರಲು ಇಷ್ಟಪಡಲ್ಲ ಎಂದಿದ್ದಾರೆ.