ವಿಪಕ್ಷಗಳ ಮೈತ್ರಿಕೂಟ ರಚನೆ ಕಸರತ್ತಿನ ನಡುವೆ ಟಿಎಂಸಿ ವಿರುದ್ಧ ಕೆರಳಿದ ಕಾಂಗ್ರೆಸ್!
ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರು ಇಡುವ ನಿಟ್ಟಿನಲ್ಲಿ ಒಂದೆಡೆ ವಿಪಕ್ಷ ಮೈತ್ರಿಕೂಟ ರಚನೆಗೆ ಪ್ರಯತ್ನಗಳು ನಡೆಯುತ್ತಿರುವಂತೆಯೇ, ಪಶ್ಚಿಮ ಬಂಗಾಳದಲ್ಲಿನ ಏಕೈಕ ಕಾಂಗ್ರೆಸ್ ಶಾಸಕ ಟಿಎಂಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದ ವಿರುದ್ಧ ಮಂಗಳವಾರ ಕಿಡಿಕಾರಿರುವ ಕಾಂಗ್ರೆಸ್, ಇಂತಹ ಶಾಸಕರ ಖರೀದಿ ಬಿಜೆಪಿಯನ್ನು ಬಲಗೊಳಿಸುತ್ತದೆ ಎಂದು ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಏಕೈಕ ಶಾಸಕರಾಗಿದ್ದ ಬೇರೊನ್ ಬಿಸ್ವಾಸ್ ಸೋಮವಾರ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸಮ್ಮುಖದಲ್ಲಿ ಅವರ ಪಕ್ಷಕ್ಕೆ ಸೇರ್ಪಡೆಯಾದರು. ಈ ಕುರಿತು ಟ್ವೀಟರ್ ನಲ್ಲಿ ಟಿಎಂಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಮೂರು ತಿಂಗಳ ನಂತರ, ಬೇರಾನ್ ಬಿಸ್ವಾಸ್ ಅವರಿಗೆ ಆಮಿಷವೊಡ್ಡಿ ಟಿಎಂಸಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದು ಸಾಗರದಿಘಿ ವಿಧಾನಸಭಾ ಕ್ಷೇತ್ರದ ಜನಾದೇಶಕ್ಕೆ ಮಾಡಿದ ಸಂಪೂರ್ಣ ದ್ರೋಹವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಏಕೈಕ ಕಾಂಗ್ರೆಸ್ ಶಾಸಕ ಟಿಎಂಸಿ ಸೇರ್ಪಡೆ
ಈ ಹಿಂದೆ ಗೋವಾ, ಮೇಘಾಲಯ, ತ್ರಿಪುರಾ ಮತ್ತು ಇತರ ರಾಜ್ಯಗಳಲ್ಲಿ ನಡೆದ ಇಂತಹ ಶಾಸಕರ ಖರೀದಿ ವಿಪಕ್ಷಗಳ ಮೈತ್ರಿಯನ್ನು ಬಲಪಡಿಸುವುದಿಲ್ಲ ಬದಲಿಗೆ ಬಿಜೆಪಿಯ ಉದ್ದೇಶಗಳನ್ನು ಮಾತ್ರ ಪೂರೈಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟನ್ನು ರೂಪಿಸುವ ಪ್ರಯತ್ನಗಳು ನಡೆಯುತ್ತಿರುವ ಸಮಯದಲ್ಲಿ ಕಾಂಗ್ರೆಸ್ ಶಾಸಕ ಟಿಎಂಸಿಗೆ ಸೇರ್ಪಡೆ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವನ್ನು ಟೀಕಿಸುವ ರಮೇಶ್ ಅವರ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ