ವ್ಯಾಟಿಕನ್ ಭೇಟಿ ವೇಳೆ ತಮ್ಮೊಂದಿಗೆ ಇದ್ದ ಮಹಿಳೆಯ ಕುರಿತು ಗೊಂದಲಕ್ಕೆ ತೆರೆ ಎಳೆದ ಒಡಿಶಾ ಸಿಎಂ ಪಟ್ನಾಯಕ್
ಭುವನೇಶ್ವರ್: ಒಡಿಶಾ ಸಿಎಂ ನವೀನ್ ಪಟ್ನಾಯಕ್ ಕಳೆದ ವರ್ಷ ವ್ಯಾಟಿಕನ್ ಸಿಟಿಗೆ ಭೇಟಿ ನೀಡಿದ್ದಾಗ ಅವರೊಂದಿಗೆ ಇದ್ದ ಮಹಿಳೆಯೊಬ್ಬರ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು.
ಇಂದು ಒಡಿಶಾ ವಿಧಾನಸಭೆಯಲ್ಲಿ ಸ್ವತಃ ಸಿಎಂ ಪಟ್ನಾಯಕ್ ಈ ವಿಷಯವಾಗಿ ಸ್ಪಷ್ಟನೆ ನೀಡಿದ್ದಾರೆ. ವ್ಯಾಟಿಕನ್ ಭೇಟಿ ವೇಳೆ ನವೀನ್ ಪಟ್ನಾಯಕ್ ಜೊತೆ ಇದ್ದ ಮಹಿಳೆಯ ಫೋಟೊ ವೈರಲ್ ಆಗಿತ್ತು. ಪ್ರತಿಪಕ್ಷಗಳು ರಾಜ್ಯಾದ್ಯಂತ ಈ ಫೋಟೋ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದವು. ಈಗ ಈ ಪ್ರಶ್ನೆಗಳಿಗೆ ಉತ್ತರಿಸಿರುವ ನವೀನ್ ಪಟ್ನಾಯಕ್ ಆಕೆ ಓರ್ವ ಫಿಸಿಯೋಥೆರೆಪಿಸ್ಟ್ ಎಂಬ ಮಾಹಿತಿ ನೀಡಿದ್ದಾರೆ.
ಶ್ರದ್ಧಾ ಆಕೆಯ ಹೆಸರಾಗಿದ್ದು, ನನ್ನ ಸಹೋದರಿ ಗೀತಾ ಮೆಹ್ತಾ ನನ್ನ ಫಿಟ್ನೆಸ್ ಸಲುವಾಗಿ ಅವರನ್ನು ಕಳಿಸಿಕೊಟ್ಟಿದ್ದರು. ಫಿಸಿಯೋಥೆರೆಪಿಸ್ಟ್ ಶ್ರದ್ಧಾಗೆ ಯಾವುದೇ ಸರ್ಕಾರಿ ಕ್ವಾರ್ಟರ್ಸ್ ನ್ನಾಗಲೀ ಪ್ರಯಾಣ ವೆಚ್ಚವನ್ನಾಗಲೀ ಸರ್ಕಾರ ಭರಿಸುತ್ತಿಲ್ಲ. ಸದನದ ಸಮಯವನ್ನು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಚರ್ಚಿಸುವುದಕ್ಕೆ ನಾವು ಬಳಕೆ ಮಾಡಬೇಕು ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ
ಸದನದ ಹೊರಗೆ ಒಳಗೆ ಬಿಜೆಪಿ ಈ ಅನಾಮಿಕ ಮಹಿಳೆಯ ಬಗ್ಗೆ ಸಾಕಷ್ಟು ಪ್ರಶ್ನೆಯನ್ನು ಕೇಳಿತ್ತು. ಆ ಮಹಿಳೆಗೆ ಸರ್ಕಾರದಿಂದ ವಸತಿ ವ್ಯವಸ್ಥೆ ಮಾಡಲಾಗಿದೆಯೇ? ಎಂಬ ಬಗ್ಗೆ ಮಾಹಿತಿ ನೀಡಬೇಕೆಂದು ಈ ಹಿಂದೆ ಬಿಜೆಪಿಯ ವಿರೋಧ ಪಕ್ಷದ ನಾಯಕ ಜಯನಾರಾಯಣ ಮಿಶ್ರಾ ಅವರು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು, ಆದರೆ ಸದನದಲ್ಲಿ ಗದ್ದಲದ ಕಾರಣ ಅವರ ಹೇಳಿಕೆಯನ್ನು ದಾಖಲಿಸಲಾಗಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ