ಸಿಕ್ಕಿಂ, ಹಿಮಾಚಲ ಪ್ರದೇಶ ದುರಂತ: ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಖರ್ಗೆ ಒತ್ತಾಯ
ನವದೆಹಲಿ: ಸಿಕ್ಕಿಂನಲ್ಲಿ ಮೇಘ ಸ್ಪೋಟ ಹಾಗೂ ಹಠಾತ್ ಪ್ರವಾಹದಿಂದಾದ ಸಾವು ನೋವುಗಳಿಗೆ ಸಂತಾಪ ಸೂಚಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿಮಾಚಲ ಪ್ರದೇಶದಲ್ಲಿ ಇತ್ತೀಚಿಗೆ ಆದ ಮಳೆ ಸಂಬಂಧಿತ ಅನಾಹುತಗಳು ಸೇರಿದಂತೆ ಇಂತಹ ದುರಂತಗಳನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಖರ್ಗೆ, ಸಿಕ್ಕಿಂನಲ್ಲಿ ಮೇಘಸ್ಫೋಟ ಮತ್ತು ಹಠಾತ್ ಪ್ರವಾಹದಿಂದಾಗಿ ಹಲವಾರು ಜನರು ಪ್ರಾಣ ಕಳೆದುಕೊಂಡಿರುವುದು ಮತ್ತು ನಮ್ಮ ವೀರ ಸೈನಿಕರು ಸೇರಿದಂತೆ ಹಲವರು ನಾಪತ್ತೆಯಾಗಿರುವುದರಿಂದ ಪರಿಸ್ಥಿತಿ ಅನಿಶ್ಚಿತವಾಗಿದೆ. "ಸುರಕ್ಷಿತ ಸ್ಥಳಗಳಲ್ಲಿ ಜನರನ್ನು ರಕ್ಷಿಸಲು ಮತ್ತು ಕಾಣೆಯಾದವರನ್ನು ಹುಡುಕಲು ಕೇಂದ್ರವು ಸಾಧ್ಯವಿರುವ ಎಲ್ಲ ಕಾರ್ಯ ಮಾಡಬೇಕು ಎಂದಿದ್ದಾರೆ.
ಮೂಲಸೌಕರ್ಯಕ್ಕೆ ಸಾಕಷ್ಟು ಹಾನಿಯಾಗಿದೆ ಮತ್ತು ಈ ಸುಂದರ ರಾಜ್ಯವನ್ನು ಪುನರ್ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಒಟ್ಟಾಗಿ ಕೆಲಸ ಮಾಡಬೇಕು." ಈ ಮಾನವೀಯ ಬಿಕ್ಕಟ್ಟಿನಲ್ಲಿ ಕಾಂಗ್ರೆಸ್ ಮತ್ತು ಕಾರ್ಯಕರ್ತರು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯವನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶದಂತಹ ದುರಂತಗಳನ್ನು ರಾಷ್ಟ್ರೀಯ ವಿಪತ್ತುಗಳೆಂದು ಘೋಷಿಸಬೇಕು, ಇದರಿಂದಾಗಿ ಈ ರಾಜ್ಯಗಳು ತಮ್ಮನ್ನು ಹೆಚ್ಚು ಸಮರ್ಥನೀಯವಾಗಿ ಪುನರ್ ನಿರ್ಮಿಸಿಕೊಳ್ಳುವಲ್ಲಿ ಸಾಕಷ್ಟು ಹಣವನ್ನು ಪಡೆಯುತ್ತವೆ" ಎಂದು ಹೇಳಿದರು.
ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಮೇಲೆ ಹಠಾತ್ ಮೇಘಸ್ಫೋಟದ ನಂತರ ನಾಪತ್ತೆಯಾದ 22 ಸೈನಿಕರ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸೇನೆಯು ಮುಂದುವರೆಸಿದ್ದು, ಇದುವರೆಗೆ ಒಬ್ಬ ಯೋಧನನ್ನು ರಕ್ಷಿಸಲಾಗಿದೆ ಎಂದು ಗುವಾಹಟಿಯ ರಕ್ಷಣಾ ಪಿಆರ್ ಒ ಬುಧವಾರ ತಿಳಿಸಿದ್ದಾರೆ. ಪಾಕ್ಯೊಂಗ್ ಜಿಲ್ಲೆಯಲ್ಲಿ 23 ಸೇನಾ ಸಿಬ್ಬಂದಿ ಸೇರಿದಂತೆ 59 ಜನರು ಕಾಣೆಯಾಗಿದ್ದು, ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿರುವುದಾಗಿ ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ