ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಭಯ ಬಿದ್ದು ಬಿಜೆಪಿ ರಾವಣನ ಹೆಸರು ತಂದಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

“ರಾಹುಲ್ ಗಾಂಧಿ ಅವರ ಜನಪ್ರಿಯತೆ ಹಾಗೂ ನಾಯಕತ್ವಕ್ಕೆ ಹೆದರಿ ಅವರನ್ನು, ರಾವಣನಂತೆ ಬಿಜೆಪಿಯವರು ಬಿಂಬಿಸಿದ್ದಾರೆ. ಬಿಜೆಪಿಗೆ ರಾಮ ರಾವಣನ ಯುದ್ಧದ ಪುರಾಣ ಸಂಪೂರ್ಣವಾಗಿ ತಿಳಿದಿಲ್ಲ.
ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್
Updated on

ಬೆಂಗಳೂರು: “ರಾಹುಲ್ ಗಾಂಧಿ ಅವರ ಜನಪ್ರಿಯತೆ ಹಾಗೂ ನಾಯಕತ್ವಕ್ಕೆ ಹೆದರಿ ಅವರನ್ನು, ರಾವಣನಂತೆ ಬಿಜೆಪಿಯವರು ಬಿಂಬಿಸಿದ್ದಾರೆ. ಬಿಜೆಪಿಗೆ ರಾಮ ರಾವಣನ ಯುದ್ಧದ ಪುರಾಣ ಸಂಪೂರ್ಣವಾಗಿ ತಿಳಿದಿಲ್ಲ. ಅದಕ್ಕೆ ಈ ರೀತಿ ಮಾಡಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಶನಿವಾರ ಅವರು ಪ್ರತಿಕ್ರಿಯೆ ನೀಡಿದರು.

ರಾಹುಲ್‌ಗಾಂಧಿ ಅವರನ್ನು ರಾವಣನನ್ನಾಗಿ ಬಿಂಬಿಸಿ ತಿರುಚಿರುವ ಬಿಜೆಪಿ ಪೋಸ್ಟರ್ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ಉತ್ತರ ಭಾರತದಲ್ಲಿ ರಾವಣನನ್ನು ಕೂಡ ಪೂಜಿಸುವ ಪದ್ದತಿ ಇದೆ. ನಮ್ಮ ಸಂಸ್ಕೃತಿಯನ್ನು ಸರಿಯಾಗಿ ತಿಳಿದುಕೊಂಡಿದ್ದರೆ ಈ ಮಟ್ಟಕ್ಕೆ ಬಿಜೆಪಿಯವರು ಇಳಿಯುತ್ತಿರಲಿಲ್ಲ. ಭಾರತ್ ಜೋಡೋ ಯಾತ್ರೆಯ ನಂತರ ಇಂಡಿಯಾ ಮೈತ್ರಿಕೂಟ ಪ್ರಾರಂಭವಾಯಿತು. ಇಂಡಿಯಾ ಮೈತ್ರಿಕೂಟ ಬಲಿಷ್ಠವಾಗಿ ರೂಪುಗೊಳ್ಳುತ್ತಿದೆ, ಇಂಡಿಯಾ ಒಂದಾಗುತ್ತಿದೆ. ಇಂಡಿಯಾ ರಕ್ಷಣೆಯಾಗಲಿದೆ. ಹೀಗಾಗಿ ಬಿಜೆಪಿಯವರು ರಾಹುಲ್ ಗಾಂಧಿ ಪಾದಯಾತ್ರೆ ಹಾಗೂ ಮೈತ್ರಿಗೆ ಹೆದರಿಕೊಂಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರಿಗೆ ರಾವಣನ ರೀತಿ 10 ತಲೆ ಹಾಕಿದ್ದಾರೆ. ರಾಮ- ರಾವಣರ ಯುದ್ಧ ಆಗುವ ಹೊತ್ತಿನಲ್ಲಿ ರಾವಣ ರಾಮನಿಗೆ ಯುದ್ಧದ ಸಂಕಲ್ಪ ಮಾಡಿಸುತ್ತಾನೆ. ಬಿಜೆಪಿಯವರು ಪುರಾಣ ತಿಳಿದುಕೊಳ್ಳಬೇಕು. ರಾಹುಲ್‌ ಗಾಂಧಿ ಅವರ ಬಗ್ಗೆ ಎಷ್ಟು ಭಯಭೀತರಾಗಿದ್ದಾರೆ ಎನ್ನುವುದು 'ರಾವಣ' ಪೋಸ್ಟರ್ ನೋಡಿದರೆ ತಿಳಿಯುತ್ತದೆ” ಎಂದರು.

“ಬಿಜೆಪಿಯ ಈ ನಡೆ ವಿರುದ್ಧ ಇಡೀ ದೇಶದಾದ್ಯಂತ ಜನರು ಬೀದಿಗಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇಲ್ಲಿಯೂ ಸಚಿವರಾದ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದರು.

ರಾಜರಾಜೇಶ್ವರಿ ನಗರದ ಒಂಬತ್ತು ವಾರ್ಡ್‌ಗಳಿಗೆ ಸಂಬಂಧಿಸಿದ ಕಾಮಗಾರಿಗಳ ಬಿಲ್ ಮೊತ್ತ ಬಿಡುಗಡೆಯಾಗಿಲ್ಲ ಎನ್ನುವ ಪ್ರಶ್ನೆಗೆ "ಬಿಡುಗಡೆ ಆಗುತ್ತದೆ, ಅಲ್ಲಿನ ಶಾಸಕರೇ ಕಾಮಗಾರಿಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿ ತನಿಖೆ ಮಾಡಿ ಎಂದು ಮನವಿ ಮಾಡಿದ್ದಾರೆ. ಅವರ ಮನವಿಯನ್ನು ಗೌರವದಿಂದ ಸ್ವೀಕರಿಸುತ್ತೇವೆ. ನೀವು (ಮಾಧ್ಯಮದವರು) ಸಹ ಅವರ ಬಗ್ಗೆ ಹೆಚ್ಚು ಮಾತನಾಡುತ್ತಿರಿ” ಎಂದರು.

ತೆರಿಗೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ನಾಗರಿಕರು ತಮ್ಮ ಆಸ್ತಿಗೆ ಅನುಗುಣವಾಗಿ ತೆರಿಗೆಯನ್ನು ಸರಿಯಾಗಿ ಕಟ್ಟಿದರೆ ಸಾಕು. ಸದ್ಯಕ್ಕೆ ಸರ್ಕಾರ ಯಾವುದೇ ಹೊಸ ತೆರಿಗೆ ಹಾಕುವ ಬಗ್ಗೆ ಆಲೋಚನೆ ಮಾಡಿಲ್ಲ” ಎಂದರು.

ನೂತನ ಮದ್ಯದಂಗಡಿಗಳಿಗೆ ಅನುಮತಿ ನೀಡುವುದಿಲ್ಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಕೇಳಿದಾಗ, “ಮುಖ್ಯಮಂತ್ರಿಗಳು ಹೇಳಿದ್ದಾರೆ. ಮದ್ಯದಂಗಡಿ ತೆರೆಯಲು ಅದಕ್ಕೆ ಆದ ಕಾನೂನು ಎಂಎಸ್ಐಎಲ್ ಸೇರಿದಂತೆ ಅನೇಕ ನಿಯಮಗಳಿವೆ. ಹೀಗಾಗಿ ಪ್ರತಿ ಹಳ್ಳಿ ಹಳ್ಳಿಯಲ್ಲಿ ಮದ್ಯದಂಗಡಿ ತೆರೆಯಲು ಆಗುವುದಿಲ್ಲ. ಇವುಗಳನ್ನು ಒಂದು ವ್ಯವಸ್ಥಿತ ರೂಪದಲ್ಲಿ ತರಬೇಕಿದೆ” ಎಂದು ತಿಳಿಸಿದರು.

ಲಿಂಗಾಯತರ ಶೇ.20 ರಷ್ಟು ಹಾಗೂ ಇತರೆಯವರ ಶೇ.80 ರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿವೆ ಎಂಬ ಪ್ರಕಾಶ್ ರಾಥೋಡ್ ಹೇಳಿಕೆಗೆ "ಅಂತಹ ಯಾವುದೇ ಲೆಕ್ಕ ಇಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಗೌಪ್ಯ ಮತದಾನ ವ್ಯವಸ್ಥೆ ಅಳವಡಿಸಿಕೊಂಡಿದ್ದೇವೆ. ಯಾರ್ಯಾರು ಮತ ಹಾಕುತ್ತಾರೆ ಎಂದು ಹೇಗೆ ತಿಳಿಯುತ್ತದೆ? ಇಡೀ ರಾಜ್ಯದ ಜನ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ, 136 ಸೀಟು ಕೊಟ್ಟಿದ್ದಾರೆ” ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com