ಸತ್ಯದ ಘೋರಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡುವಾಗ ಕನಿಷ್ಠ ಆತ್ಮಸಾಕ್ಷಿಯನ್ನಾದರೂ ಪ್ರಶ್ನಿಸಿಕೊಳ್ಳಿ: ಸಿಎಂ ವಿರುದ್ಧ ಶೇಖಾವತ್ ಗರಂ

ಮೇಕೆದಾಟು ಯೋಜನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗರಂ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ತಪ್ಪು ಮಾಹಿತಿ ಹರಡುವುದು ಸರಿಯಲ್ಲ ಎಂದು ಗಜೇಂದ್ರ ಸಿಂಗ್ ಶೇಖಾವತ್ ಟ್ವಿಟರ್​ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಸಿದ್ದರಾಮಯ್ಯ
ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಸಿದ್ದರಾಮಯ್ಯ
Updated on

ಬೆಂಗಳೂರು: ಮೇಕೆದಾಟು ಯೋಜನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗರಂ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ತಪ್ಪು ಮಾಹಿತಿ ಹರಡುವುದು ಸರಿಯಲ್ಲ ಎಂದು ಗಜೇಂದ್ರ ಸಿಂಗ್ ಶೇಖಾವತ್ ಟ್ವಿಟರ್​ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ, ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಹರಡುವುದು ಕಾಂಗ್ರೆಸಿಗರಿಗೆ ಅಂಟಿದ ಚಟ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಒಬ್ಬ ಮುಖ್ಯಮಂತ್ರಿಯೇ ಖುದ್ದಾಗಿ ತಪ್ಪು ಮಾಹಿತಿಗಳನ್ನು ಬಿತ್ತಿ ಜನಮಾನಸವನ್ನು ಹಾಳುಗೆಡವಲು ಮುಂದಾಗುತ್ತಾರೆಂದು ನಾವು ಭಾವಿಸಿರಲಿಲ್ಲ.

ಮೇಕೆದಾಟು ಯೋಜನೆಯ ಸ್ಥಿತಿ-ಗತಿ ಹಾಗೂ ವಾಸ್ತವಾಂಶ ಏನೆಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ನಿಮಗೆ ಬ್ರೀಫೀಂಗ್ ತಂಡ ನೀಡಿದ ಅರ್ಧಂಬರ್ದ ಮಾಹಿತಿ ಆಧರಿಸಿ ನೀವು ತಪ್ಪು ಮಾಹಿತಿಗಳ ಸರಣಿಯನ್ನೇ ಹರಿಬಿಟ್ಟಂತೆ ತೋರುತ್ತದೆ. ಹೀಗಾಗಿ ವಾಸ್ತವ ಏನೆಂಬುದನ್ನು ನಾವೇ ಹೇಳಬೇಕಾಗಿದೆ.

ಮೊದಲನೆಯದಾಗಿ CWMA ಯ ಹಲವು ಸಭೆಗಳಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಕುರಿತು ಚರ್ಚೆಯನ್ನು ಅಜೆಂಡಾ ವಿಷಯವಾಗಿ ಸೇರಿಸಲಾಗಿತ್ತು. ಆದರೆ ಈ ಕಾರ್ಯಸೂಚಿಯ ಬಗ್ಗೆ ನೆರೆಯ ರಾಜ್ಯಗಳ ನಡುವೆ ಒಮ್ಮತ ಮೂಡದೇ ಇರುವುದರಿಂದ  ಈ  ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ಇದು ಕೇಂದ್ರದ ತಪ್ಪಲ್ಲ.

ಕಳಸಾ ಮತ್ತು ಬಂಡೂರ ನಾಲೆ ಯೋಜನೆ ಡಿಪಿಆರ್‌ಗಳನ್ನು ಈಗಾಗಲೇ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಕೆಲವು ಷರತ್ತುಗಳೊಂದಿಗೆ ಅನುಮೋದಿಸಿದೆ ಮತ್ತು ಅದನ್ನು ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ತಿಳಿಸಲಾಗಿದೆ. ಈ ಮಾಹಿತಿಯನ್ನು ನೀವು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದೀರಲ್ಲವೇ ?

2017-17ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)- ತ್ವರಿತ ನೀರಾವರಿ ಕಾರ್ಯಕ್ರಮದ ಅಡಿಯಲ್ಲಿ ಆದ್ಯತೆ ನೀಡಲಾದ ಕರ್ನಾಟಕದ 5 ಯೋಜನೆಗಳಲ್ಲಿ, ಮೂರು  ಪೂರ್ಣಗೊಂಡಿದೆ. ಎರಡು ಕಾಮಗಾರಿ ಚಾಲನೆಯಲ್ಲಿದೆ. ಈ ಯೋಜನೆಗಾಗಿ ಕೇಂದ್ರದ ಪಾಲಿನ 1238.30 ಕೋಟಿ ರೂ.ಗಳ ಪೈಕಿ 1190.05 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. ಇದು ರಾಜ್ಯದ ಹಣಕಾಸು ಸಚಿವಾಲಯವನ್ನೂ ನಿಭಾಯಿಸುತ್ತಿರುವ ನಿಮ್ಮ ಗಮನಕ್ಕೆ ಬಾರದಿರುವುದು ಚೋದ್ಯವಲ್ಲವೇ ?

ಅಟಲ್ ಭೂ ಜಲ ಯೋಜನೆ ಅಡಿಯಲ್ಲಿ, ಕರ್ನಾಟಕಕ್ಕೆ ಕೇಂದ್ರದಿಂದ ಈಗಾಗಲೇ 629.54 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ 28.10.2023ರ ವರೆಗೆ ಕೇವಲ 274.05 ಕೋಟಿ ರೂ. ಮಾತ್ರ ಬಳಕೆ ಮಾಡಿಕೊಂಡಿದ್ದೀರಿ.

ಸತ್ಯದ ಘೋರಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡುವಾಗ ಕನಿಷ್ಠ ಆತ್ಮಸಾಕ್ಷಿಯನ್ನಾದರೂ ಪ್ರಶ್ನಿಸಿಕೊಳ್ಳಿ. ಇಲ್ಲವಾದರೆ ಸುಳ್ಳಿನ ಉಪಾಸನೆಯೇ ನಿಮ್ಮ ನಿತ್ಯಕರ್ಮವೆಂದು‌‌ ಕರ್ನಾಟಕದ ಜನ ನಿಮ್ಮ ಬಗ್ಗೆ ಕನಿಕರ ಹಾಗೂ ತಿರಸ್ಕಾರವನ್ನು  ತೋರಬಹುದು ಎಂದು ಕಿಡಿ ಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com