ಭ್ರಷ್ಟಾಚಾರ ಪ್ರಕರಣ: ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡುಗೆ 14 ದಿನಗಳ ನ್ಯಾಯಾಂಗ ಬಂಧನ!
ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನ್ಯಾಯಾಲಯವು ಇಂದು ಕೌಶಲ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
Published: 10th September 2023 08:32 PM | Last Updated: 10th September 2023 08:44 PM | A+A A-

ಚಂದ್ರಬಾಬು ನಾಯ್ಡು
ಅಮರಾವತಿ(ಆಂಧ್ರ): ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನ್ಯಾಯಾಲಯವು ಇಂದು ಕೌಶಲ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಮಾಜಿ ಮುಖ್ಯಮಂತ್ರಿ ನಾಯ್ಡು ಅವರನ್ನು 14 ದಿನಗಳ ಕಾಲ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲಿನ ಸುತ್ತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಸೆಪ್ಟೆಂಬರ್ 8 ಮಧ್ಯಾಹ್ನ 3.40ಕ್ಕೆ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ವಿಜಯವಾಡದ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದಕ್ಕೂ ಮುನ್ನ ಅವರನ್ನು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.
ಸಿಐಡಿ ತಂಡವು ಶನಿವಾರ (ಸೆ.9) ಬೆಳಗ್ಗೆ 6 ಗಂಟೆಗೆ ನಂದ್ಯಾಲ್ ನಗರದ ಜ್ಞಾನಪುರಂನಲ್ಲಿರುವ ಆರ್ ಕೆ ಫಂಕ್ಷನ್ ಹಾಲ್ ನಿಂದ ಮಾಜಿ ಕೇಂದ್ರ ಸಚಿವ ನಾಯ್ಡು ಅವರನ್ನು ಬಂಧಿಸಿತ್ತು.
ಏತನ್ಮಧ್ಯೆ ಎನ್ ಚಂದ್ರಬಾಬು ನಾಯ್ಡು ಅವರ ಪಕ್ಷದ ಟಿಡಿಪಿ, ನಾಯ್ಡು ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಇಡೀ ವಿಷಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದೆ. ಅಲ್ಲದೆ ಜನರು ಅವರ ಜೊತೆಗಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: ಚಂದ್ರಬಾಬು ನಾಯ್ಡು ಬಂಧನ ಖಂಡಿಸಿದ ಪವನ್ ಕಲ್ಯಾಣ್; ರಾಜಕೀಯ ಸೇಡು ಎಂದ ಟಾಲಿವುಡ್ ನಟ
ಎನ್ ಚಂದ್ರಬಾಬು ನಾಯ್ಡು ವಿಚಾರಣೆ ವೇಳೆ ಸಹಕರಿಸಿಲ್ಲ ಎಂದು ಸಿಐಡಿ ಹೇಳಿದೆ. ನಮ್ಮ ಪ್ರಶ್ನೆಗಳಿಗೆ ಅವರು ಅಸ್ಪಷ್ಟ ಉತ್ತರಗಳನ್ನು ನೀಡಿದ್ದಾರೆ. ಅಲ್ಲದೆ ಕೆಲವು ವಿಷಯಗಳು ನೆನಪಿಲ್ಲ ಎಂದು ಹೇಳಿದ್ದಾರೆ. ಈ 'ಕೇಸ್ ಡೈರಿ'ಗೆ ಸಂಬಂಧಿಸಿದ ಸಾಕ್ಷ್ಯದ ಭಾಗವಾಗಿರುವ ಟಿಪ್ಪಣಿ ಫೈಲ್‌ಗಳ ಆಧಾರದ ಮೇಲೆ ನಾಯ್ಡು ಅವರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು.
ಸರ್ಕಾರಿ ಸಲಹೆಗಾರ ಎಸ್ ರಾಮಕೃಷ್ಣ ರೆಡ್ಡಿ ಮಾತನಾಡಿ, ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಬಂಧನಕ್ಕೂ ಮುನ್ನ ನೋಟಿಸ್ ನೀಡುವ ಅಗತ್ಯವಿಲ್ಲ. ಎಫ್‌ಐಆರ್‌ನಲ್ಲಿ ಆರೋಪಿಯ ಹೆಸರು ನಮೂದಿಸದಿದ್ದರೂ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ಆಂಧ್ರಪ್ರದೇಶ ಪೊಲೀಸರು ಶನಿವಾರ ನಾಯ್ಡು ಅವರನ್ನು ಕೌಶಲ್ಯಾಭಿವೃದ್ಧಿ ನಿಗಮದ ಹಗರಣದ ಪ್ರಮುಖ ಸಂಚುಕೋರ ಎಂದು ಬಣ್ಣಿಸಿದ್ದಾರೆ. ಈ ಹಗರಣದಿಂದ ರಾಜ್ಯ ಸರ್ಕಾರಕ್ಕೆ 300 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.