ಆಂಧ್ರ ಪ್ರದೇಶ ಚುನಾವಣೆ: ಟಿಡಿಪಿಯೊಂದಿಗೆ ಜನಸೇನಾ ಪಕ್ಷ ಮೈತ್ರಿ- ಪವನ್ ಕಲ್ಯಾಣ್
ವಿಜಯವಾಡ: ಮುಂಬರುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿಯೊಂದಿಗೆ ಜನಸೇನಾ ಪಕ್ಷ ಮೈತ್ರಿ ಮಾಡಿಕೊಳ್ಳಲಿದೆ ಎಂದು ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಹೇಳಿದ್ದಾರೆ.
ರಾಜಮಹೇಂದ್ರವರಂನ ಕೇಂದ್ರ ಕಾರಾಗೃಹದಲ್ಲಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಗುರುವಾರ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ, ಪವನ್ ಕಲ್ಯಾಣ್, ಟಿಡಿಪಿಯೊಂದಿಗೆ ಪಕ್ಷದ ಮೈತ್ರಿಯನ್ನು ಖಚಿತಪಡಿಸಿದರು.
ಇಲ್ಲಿಯವರೆಗೂ ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಆಕಾಂಕ್ಷೆ ಇಟ್ಟುಕೊಂಡಿದ್ದೆ. ಆದರೆ ಈಗ 2024ರ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ ಆರ್ ಸಿ ಪಕ್ಷವನ್ನು ಅಧಿಕಾರದಿಂದ ಕಿತ್ತು ಹಾಕಲು ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದರು.
ಇನ್ನೂ ಮುಂದೆ ಆಂಧ್ರದಲ್ಲಿ ವೈಎಸ್ ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದ ಪವನ್ ಕಲ್ಯಾಣ್, ಜನಸೇನಾ ಪಕ್ಷ ಮತ್ತು ಟಿಡಿಪಿ ನಡುವಿನ ಮೈತ್ರಿಗೆ ಬಿಜೆಪಿ ಕೂಡ ಸೇರುವ ಭರವಸೆಯಲ್ಲಿದ್ದಾರೆ. ಇನ್ನೂ ಆರು ತಿಂಗಳಲ್ಲಿ ಅಥವಾ ಅದಕ್ಕೂ ಮುಂಚಿತವಾಗಿ ಚುನಾವಣೆ ನಡೆದರೂ ಜನಾಸೇನಾ ಪಕ್ಷ ಹಾಗೂ ಟಿಡಿಪಿ ಮೈತ್ರಿ ಎದುರಿಸಲು ಸಜ್ಜಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಉಭಯ ಪಕ್ಷಗಳ ಕ್ರಿಯಾ ಯೋಜನೆ ರೂಪಿಸಲು ಜಂಟಿ ಕ್ರಿಯಾ ಸಮಿತಿ ರಚಿಸಲಾಗುವುದು ಎಂದು ಪವನ್ ಕಲ್ಯಾಣ್ ಘೋಷಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ