ಸಂಸತ್ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿ: ಕೇಂದ್ರಕ್ಕೆ ಕಾಂಗ್ರೆಸ್ ಆಗ್ರಹ
ನಾಳೆಯಿಂದ ಆರಂಭವಾಗಲಿರುವ ಸಂಸತ್ತಿನ ಒಂದು ವಾರದ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸುವಂತೆ ಕಾಂಗ್ರೆಸ್ ಭಾನುವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
Published: 17th September 2023 03:43 PM | Last Updated: 17th September 2023 03:43 PM | A+A A-

ಜೈರಾಮ್ ರಮೇಶ್
ನವದೆಹಲಿ: ನಾಳೆಯಿಂದ ಆರಂಭವಾಗಲಿರುವ ಸಂಸತ್ತಿನ ಒಂದು ವಾರದ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸುವಂತೆ ಕಾಂಗ್ರೆಸ್ ಭಾನುವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಆಗ್ರಹಿಸುತ್ತಿರುವುದಾಗಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ: ಸಂಸತ್ ವಿಶೇಷ ಅಧಿವೇಶನ ಹಿನ್ನೆಲೆ, ಭಾನುವಾರ ಸಂಜೆ ಸರ್ವಪಕ್ಷ ಸಭೆ; ಅಜೆಂಡಾ ಹೀಗಿದೆ...
ಈ ಸಂಬಂಧ ಹಿಂದಿನ ಕಾಂಗ್ರೆಸ್ ಸರ್ಕಾರಗಳನ್ನು ಶ್ಲಾಘಿಸಿದ ಜೈರಾಮ್ ರಮೇಶ್, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು 1989ರ ಮೇ ನಲ್ಲಿ ಪಂಚಾಯತ್ ಮತ್ತು ನಗರಪಾಲಿಕೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಿದರು - ಇದು ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ಆದರೆ ರಾಜ್ಯಸಭೆಯಲ್ಲಿ ವಿಫಲವಾಯಿತು.
"ಪ್ರಧಾನಿ ಪಿವಿ ನರಸಿಂಹ ರಾವ್ ಅವರು 1993 ರ ಏಪ್ರಿಲ್ ನಲ್ಲಿ ಪಂಚಾಯತ್ ಮತ್ತು ನಗರಪಾಲಿಕೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಿದರು ಮತ್ತು ಈ ಎರಡೂ ಮಸೂದೆಗಳು ಅಂಗೀಕರಿಸಲ್ಪಟ್ಟವು ಮತ್ತು ಕಾನೂನಾಗಿ ಮಾರ್ಪಟ್ಟವು. ಈಗ ಪಂಚಾಯಿತಿ ಮತ್ತು ನಗರಪಾಲಿಕೆಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಚುನಾಯಿತ ಮಹಿಳಾ ಪ್ರತಿನಿಧಿಗಳಿದ್ದಾರೆ'' ಎಂದು ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಸತ್ತು ಮತ್ತು ರಾಜ್ಯ ವಿಧಾನಸಭೆ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ತಂದರು. ಈ ಮಸೂದೆಯನ್ನು ಮಾರ್ಚ್ 9, 2010 ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಆದರೆ ಲೋಕಸಭೆಯಲ್ಲಿ ಅಂಗೀಕರಿಸಿಲ್ಲ.
ರಾಜ್ಯಸಭೆಯಲ್ಲಿ ಮಂಡಿಸಿದ/ಅಂಗೀಕಾರಗೊಂಡ ವಿಧೇಯಕಗಳು ರದ್ದಾಗುವುದಿಲ್ಲ. ಮಹಿಳಾ ಮೀಸಲಾತಿ ಮಸೂದೆ ಇನ್ನೂ ಹೆಚ್ಚು ಸಕ್ರಿಯವಾಗಿದೆ. ಕಾಂಗ್ರೆಸ್ ಪಕ್ಷ ಕಳೆದ ಒಂಬತ್ತು ವರ್ಷಗಳಿಂದ ರಾಜ್ಯಸಭೆಯಲ್ಲಿ ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ಈಗ ಲೋಕಸಭೆಯಲ್ಲೂ ಅಂಗೀಕರಿಸಬೇಕು ಎಂದು ಒತ್ತಾಯಿಸುತ್ತಿರುವುದಾಗಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.