
ನವದೆಹಲಿ: ಇಂಡಿಯಾ (INDIA) ಮೈತ್ರಿಕೂಟದಲ್ಲಿರುವ ಡಿಎಂಕೆ ಸನಾತನ ಧರ್ಮದ ವಿರುದ್ಧ ಮಾತನಾಡಿರುವುದು ಕಾಂಗ್ರೆಸ್ ಗೆ ತೀವ್ರ ಹಿನ್ನಡೆಯುಂಟಾಗಿದ್ದು, ಈ ಬಗ್ಗೆ ಪಕ್ಷದ ನಾಯಕರು ಎಚ್ಚರ ವಹಿಸಲು ಮುಂದಾಗಿದ್ದಾರೆ.
ಈ ವಿಷಯವಾಗಿ ಜಾಗರೂಕತೆಯಿಂದ ಹೇಳಿಕೆ ನೀಡಬೇಕೆಂಬ ಅಭಿಪ್ರಾಯವನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ. ಸನಾತನ ಧರ್ಮದ ವಿಷಯದಲ್ಲಿ ಪಕ್ಷ ಹಾಗೂ ಮಿತ್ರ ಪಕ್ಷಗಳು ನೀಡುವ ಹೇಳಿಕೆ ಬಿಜೆಪಿಯ ಅಜೆಂಡಾಗಳಿಗೆ ಬಲಿಯಾಗಬಾರದು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಚರ್ಚಿಸಿದ್ದಾರೆ.
ಸನಾತನ ಧರ್ಮದ ಕುರಿತ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗಂಭೀರ ಚರ್ಚೆಯಾಗಿದ್ದು, ಚತ್ತೀಸ್ ಗಢ ಸಿಎಂ ಭೂಪೇಶ್ ಬಘೇಲ್ ಹಾಗೂ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ ಸಿಂಗ್ಮ್ ಅವರು, ಸನಾತನ ಧರ್ಮದ ವಿಷಯದ ಕುರಿತ ಹೇಳಿಕೆಗಳಿಂದ ಸಾಧ್ಯವಾದಷ್ಟೂ ಅಂತರ ಕಾಯ್ದುಕೊಳ್ಳಬೇಕು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಜನಸಾಮಾನ್ಯರ ವಿಷಯ ಪ್ರಸ್ತಾಪಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಸಹ ಇದೇ ರೀತಿಯ ಅಭಿಪ್ರಾಯ ನೀಡಿದ್ದು, ಪಕ್ಷದ ಸಾಂಪ್ರದಾಯಿಕ ಮತ ಬ್ಯಾಂಕ್ ಆಗಿರುವ ಬಡವರ, ಹಿಂದುಳಿದ ಸಮುದಾಯಗಳ ಕುರಿತ ವಿಷಯಗಳನ್ನು ಹೆಚ್ಚು ಪ್ರಸ್ತಾಪಿಸುವಂತೆ ಸಲಹೆ ನೀಡಿದ್ದಾರೆ. ಸನಾತನ ಧರ್ಮದ ಬಗ್ಗೆ ಮಾತನಾಡುವುದು ಪಕ್ಷಕ್ಕೆ ಹೆಚ್ಚಿನ ಹಾನಿಯುಂಟುಮಾಡಲಿದ್ದು, ಬಿಜೆಪಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ಮಾಡಿಕೊಡಲಿದೆ ಎಂದು ಬಘೇಲ್ ಹಾಗೂ ದಿಗ್ವಿಜಯ ಸಿಂಗ್ ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
Advertisement