ಐತಿಹಾಸಿಕ! ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ, ಕಾಂಗ್ರೆಸ್ ಸ್ವಾಗತ
ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದ ಮೊದಲ ಅಧಿವೇಶನದ ನಂತರ ಸೋಮವಾರ ಸಂಜೆ ಕೇಂದ್ರ ಸಚಿವ ಸಂಪುಟ ಸಭೆ ಸೇರಿತು.
Published: 18th September 2023 11:44 PM | Last Updated: 19th September 2023 01:10 AM | A+A A-

ಕೇಂದ್ರ ಸಚಿವ ಸಂಪುಟ ಸಭೆ
ನವದೆಹಲಿ: ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ಈ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳು ಮತ್ತು ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, ಮಹಿಳಾ ಮೀಸಲಾತಿಯ ಬೇಡಿಕೆಯನ್ನು ಈಡೇರಿಸುವ ನೈತಿಕ ಧೈರ್ಯ ಮೋದಿ ಸರ್ಕಾರಕ್ಕೆ ಮಾತ್ರ ಇತ್ತು, ಇದು ಸಂಪುಟದ ಅನುಮೋದನೆಯಿಂದ ಸಾಬೀತಾಗಿದೆ. ನರೇಂದ್ರ ಮೋದಿ ಜೀ ಮತ್ತು ಮೋದಿ ಸರ್ಕಾರಕ್ಕೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದರು. ನಂತರ ಆ ಫೋಸ್ಟ್ ನ್ನು ಡಿಲೀಟ್ ಮಾಡಿದ್ದಾರೆ.
ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದ ಮೊದಲ ಅಧಿವೇಶನದ ನಂತರ ಸೋಮವಾರ ಸಂಜೆ ಕೇಂದ್ರ ಸಚಿವ ಸಂಪುಟ ಸಭೆ ಸೇರಿತು.ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ 90 ನಿಮಿಷಗಳ ಕಾಲ ನಡೆಯಿತು. ಮುಂದಿನ ದಿನಗಳಲ್ಲಿ ಮಹಿಳಾ ಸದಸ್ಯರನ್ನು ಸಂಸತ್ತಿಗೆ ಕರೆತರುವಂತೆ ಬಿಜೆಪಿಯ ಹಲವು ಸಚಿವರು ಮತ್ತು ಸಂಸದರಿಗೆ ಹೇಳಲಾಗಿತ್ತು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೋಮವಾರ ಹಲವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸರ್ವಪಕ್ಷ ಸಭೆ: ಮಹಿಳಾ ಮೀಸಲಾತಿ ಮಸೂದೆಗೆ ಹಲವು ಪ್ರಾದೇಶಿಕ ಪಕ್ಷಗಳು ಆಗ್ರಹ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಖಾತರಿಪಡಿಸುವ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವಂತೆ ರಾಜಕೀಯ ಪಕ್ಷಗಳ ಮುಖಂಡರು ಒತ್ತಾಯಿಸಿದ್ದಾರೆ. 2010ರಲ್ಲಿ ರಾಜ್ಯಸಭೆ ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು.
ಇದಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ಸಂಸತ್ ಅಧಿವೇಶನದಲ್ಲಿ "ಐತಿಹಾಸಿಕ ನಿರ್ಧಾರಗಳನ್ನು" ತೆಗೆದುಕೊಳ್ಳಲಾಗುವುದು, ಇದು ಅಲ್ಪಾವಧಿಯದ್ದಾಗಿರಬಹುದು ಆದರೆ ಸಂದರ್ಭಕ್ಕೆ ದೊಡ್ಡದಾಗಿದೆ ಎಂದು ಹೇಳಿದ್ದರು. ಲೋಕಸಭೆಯಲ್ಲಿ 75 ವರ್ಷಗಳ ಸಂಸತ್ತಿನ ಚರ್ಚೆಯಲ್ಲಿ ಮಾತನಾಡಿದ ಅವರು, ವರ್ಷಗಳಿಂದ ಮಹಿಳಾ ಸಂಸದಿಯರ ಕೊಡುಗೆ ಹೆಚ್ಚುತ್ತಿದೆ ಎಂದು ಪ್ರತಿಪಾದಿಸಿದರು.
ಸಂಪುಟ ಸಭೆಯಲ್ಲಿ ರಾಜನಾಥ್ ಸಿಂಗ್, ಅಮಿತ್ ಶಾ, ಪಿಯೂಷ್ ಗೋಯಲ್, ಪ್ರಲ್ಹಾದ್ ಜೋಶಿ, ಎಸ್ ಜೈಶಂಕರ್, ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ ಮತ್ತು ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಕೇಂದ್ರ ಸಚಿವರು ಭಾಗವಹಿಸಿದ್ದರು. ಸೆಪ್ಟೆಂಬರ್ 18ರಿಂದ 22ರವರೆಗೆ ನಡೆಯಲಿರುವ ವಿಶೇಷ ಸಂಸತ್ ಅಧಿವೇಶನ ಘೋಷಿಸಿದಾಗಿನಿಂದಲೂ ಮಹಿಳಾ ಮೀಸಲಾತಿ ಮಸೂದೆ ಸೇರಿದಂತೆ ವಿವಿಧ ಮಸೂದೆಗಳ ಬಗ್ಗೆ ಊಹಾಪೋಹಗಳು ಎದ್ದಿವೆ.
ಕೇಂದ್ರ ಸಚಿವ ಸಂಪುಟದ ವರದಿ ನಿರ್ಧಾರ"ವನ್ನು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಸ್ವಾಗತಿಸಿದ್ದಾರೆ. ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು ಎಂಬುದು ಕಾಂಗ್ರೆಸ್ ಪಕ್ಷದ ಬಹುದಿನಗಳ ಬೇಡಿಕೆಯಾಗಿದೆ. ನಾವು ಕೇಂದ್ರ ಸಚಿವ ಸಂಪುಟದ ವರದಿ ನಿರ್ಧಾರವನ್ನು ಸ್ವಾಗತಿಸುತ್ತೇವೆ ಮತ್ತು ಮಸೂದೆಯ ವಿವರಗಳಿಗಾಗಿ ಕಾಯುತ್ತಿದ್ದೇವೆ. ವಿಶೇಷ ಅಧಿವೇಶನದ ಮೊದಲು ಸರ್ವಪಕ್ಷಗಳ ಸಭೆಯಲ್ಲಿ ಇದನ್ನು ಚೆನ್ನಾಗಿ ಚರ್ಚಿಸಬಹುದಿತ್ತು ಮತ್ತು ಗೌಪ್ಯತೆಯ ಮುಸುಕಿನಡಿಯಲ್ಲಿ ಕಾರ್ಯನಿರ್ವಹಿಸುವ ಬದಲು ಒಮ್ಮತವನ್ನು ನಿರ್ಮಿಸಬಹುದಿತ್ತು ಎಂದು ರಮೇಶ್ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
It’s been a long-standing demand of the Congress party to implement women’s reservation. We welcome the reported decision of the Union Cabinet and await the details of the Bill. This could have very well been discussed in the all-party meeting before the Special Session, and… https://t.co/lVI9RLHVY6
— Jairam Ramesh (@Jairam_Ramesh) September 18, 2023