ಮಹಿಳಾ ಮೀಸಲಾತಿ ಅವಧಿ 15 ವರ್ಷ, ಶೇ.33 ರೊಳಗೇ SC/ST ಗೆ ಕೋಟಾ; 2024 ಚುನಾವಣೆಗೆ ಜಾರಿ ಕಷ್ಟಸಾಧ್ಯ!
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇಂದು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದರು. ಈ ಮಸೂದೆ ಮಂಡನೆ ವೇಳೆ ಪ್ರತಿಪಕ್ಷಗಳು ಭಾರಿ ಕೋಲಾಹಲ ಸೃಷ್ಟಿಸಿದವು.
Published: 19th September 2023 04:39 PM | Last Updated: 19th September 2023 07:00 PM | A+A A-

ಮಹಿಳಾ ಮೀಸಲಾತಿ ಮಸೂದೆ
ನವದೆಹಲಿ: ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇಂದು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದರು. ಈ ಮಸೂದೆ ಮಂಡನೆ ವೇಳೆ ಪ್ರತಿಪಕ್ಷಗಳು ಭಾರಿ ಕೋಲಾಹಲ ಸೃಷ್ಟಿಸಿದವು.
ಮಹಿಳಾ ಮೀಸಲಾತಿ ಮಸೂದೆಯ ಹೆಸರನ್ನು 'ನಾರಿ ಶಕ್ತಿ ವಂದನ್ ಕಾಯ್ದೆ' ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಈ ಕಾಯ್ದೆ ಜಾರಿಯಾದ ನಂತರ ನಮ್ಮ ಪ್ರಜಾಪ್ರಭುತ್ವ ಗಟ್ಟಿಯಾಗಲಿದೆ. ಈ ಕಾಯ್ದೆಯನ್ನು ಕಾನೂನು ಮಾಡಲು ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದರು.
ಮಹಿಳಾ ಮೀಸಲಾತಿ ಮಸೂದೆಯ ಅವಧಿ 15 ವರ್ಷಗಳಾಗಿರುತ್ತದೆ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ. ಆದಾಗ್ಯೂ, ಈ ಅವಧಿಯನ್ನು ವಿಸ್ತರಿಸುವ ಅಧಿಕಾರವನ್ನು ಸಂಸತ್ತು ಹೊಂದಿರುತ್ತದೆ. ಈ ಕಾಯ್ದೆ ಜಾರಿಯಾದ ನಂತರ ಲೋಕಸಭೆಯಲ್ಲಿ ಮಹಿಳಾ ಸ್ಥಾನಗಳ ಸಂಖ್ಯೆ 181ಕ್ಕೆ ಏರಲಿದೆ ಎಂದು ಮೇಘವಾಲ್ ಹೇಳಿದ್ದಾರೆ. ಪ್ರಸ್ತುತ ಲೋಕಸಭೆಯಲ್ಲಿ ಮಹಿಳಾ ಸಂಸದರ ಸಂಖ್ಯೆ 82 ಇದೆ.
ಇದನ್ನೂ ಓದಿ: ಸಂಸತ್ತಿನಲ್ಲಿ ಅಧಿಕೃತವಾಗಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಎನ್‌ಡಿಎ
ಮಸೂದೆಯ ಕರಡು ಪ್ರಕಾರ, ಸಂಸತ್ತಿನಲ್ಲಿ 33 ಪ್ರತಿಶತ ಸ್ಥಾನಗಳು ಮತ್ತು ದೆಹಲಿ ಸೇರಿದಂತೆ ಎಲ್ಲಾ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಿಡಲಾಗುವುದು. ಎಸ್‌ಸಿ-ಎಸ್‌ಟಿ ವರ್ಗಕ್ಕೆ ಕೋಟಾದೊಳಗೆ ಕೋಟಾ ಜಾರಿಯಾಗುವುದು ದೊಡ್ಡ ವಿಷಯ. ಅಂದರೆ ಶೇ.33ರ ಮೀಸಲಾತಿಯೊಳಗೆ ಎಸ್‌ಸಿ-ಎಸ್‌ಟಿಗೆ ಸೇರಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಲಾಗುವುದು ಎಂದರು.
ಡಿಲಿಮಿಟೇಶನ್ ನಂತರವೇ ಮೀಸಲಾತಿ ಜಾರಿ
ಡಿಲಿಮಿಟೇಶನ್ ನಂತರವೇ ಮೀಸಲಾತಿ ಜಾರಿಯಾಗಲಿದೆ ಎಂದು ಮಸೂದೆಯ ಕರಡು ಪ್ರತಿಯಲ್ಲಿ ಹೇಳಲಾಗಿದೆ. ಮಸೂದೆಯ ಕರಡು ಪ್ರಕಾರ, ಡಿಲಿಮಿಟೇಶನ್‌ಗಾಗಿ ಆಯೋಗವನ್ನು ರಚಿಸಲಾಗುತ್ತದೆ. ಮರುವಿಂಗಡಣೆ ನಂತರ, ಸೀಟುಗಳು ಸುಮಾರು 30 ಪ್ರತಿಶತದಷ್ಟು ಹೆಚ್ಚಾಗುತ್ತವೆ. ಮರುವಿಂಗಡಣೆ ಸಂಸತ್ತು ಮತ್ತು ವಿಧಾನಸಭೆ ಎರಡರಲ್ಲೂ ಇರಲಿದೆ.
ಇದನ್ನೂ ಓದಿ: ಇದು ನಮ್ಮದು: ಮಹಿಳಾ ಮೀಸಲಾತಿ ಮಸೂದೆ ಕುರಿತು ಸೋನಿಯಾ ಗಾಂಧಿ ಹೇಳಿಕೆ
ಮಸೂದೆ ಮಂಡನೆ ವೇಳೆ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿಲ್ಲ ಎಂದು ಹೇಳಿದರು. ಇದು ಕಾಂಗ್ರೆಸ್ ನ ಷಡ್ಯಂತ್ರದಂತೆ ತೋರುತ್ತಿದೆ ಎಂದು ಆರೋಪಿಸಿದ್ದರು.