
ನವದೆಹಲಿ: ಕಳೆದ ಫೆಬ್ರವರಿಯಲ್ಲಿ ನಡೆದ ಚಂಡೀಗಢ ಮೇಯರ್ ಚುನಾವಣೆ ವೇಳೆ ತಾನೇ ಮತ ಪತ್ರಗಳನ್ನು ತಿದ್ದುವ ಮೂಲಕ ಅಸಿಂಧುಗೊಳಿಸಿದ್ದ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಚಂಡೀಗಢ ಮೇಯರ್ ಚುನಾವಣೆಯ ಫಲಿತಾಂಶವನ್ನೇ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಅನಿಲ್ ಮಸಿಹ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಕೋರ್ಟ್ ಮುಂದೆ ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಮತ್ತು ಮತ ಎಣಿಕೆಯ ಸಮಯದಲ್ಲಿನ ಅವರ "ದುಷ್ಕೃತ್ಯ" ಕ್ಕಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶಿಸಿತ್ತು.
ತಾನು ಖಿನ್ನತೆ ಮತ್ತು ಆತಂಕದಿಂದ ತತ್ತರಿಸುತ್ತಿದ್ದೇನೆ. ಮತಪತ್ರಗಳನ್ನು ತಿದ್ದಿದ ಆರೋಪ ನಿರಾಕರಿಸಿದ ಹಿಂದಿನ ಅಫಿಡವಿಟ್ ಅನ್ನು ಹಿಂಪಡೆಯುವುದಾಗಿ ಮಸಿಹ್ ಸುಪ್ರೀಂ ಕೋರ್ಟ್ ತಿಳಿಸಿದ್ದಾರೆ.
"ಜನವರಿ 31 ರಂದು ಚುನಾವಣಾ ಪ್ರಕ್ರಿಯೆ ವೀಡಿಯೊ ರೆಕಾರ್ಡಿಂಗ್ ಆನ್‌ಲೈನ್‌ನಲ್ಲಿ ಸೋರಿಕೆಯಾದ ಅದರ ನಂತರ ತಮ್ಮ ವಿರುದ್ಧ ರಾಜಕೀಯ ಪಕ್ಷಗಳಿಂದ ಮತ್ತು ಸಾಮಾಜಿಕ ಮಾಧ್ಯಮಗಳಿಂದ ತೀವ್ರ ಟೀಕೆ ಎದುರಿಸುತ್ತಿದ್ದು, ಕುಟುಂಬ ಸದಸ್ಯರು ಸೇರಿದಂತೆ, ನಾನು ಅಪಾರ ಮಾನಸಿಕ ಆಘಾತ ಮತ್ತು ಒತ್ತಡ ಎದುರಿಸುತ್ತಿರುವುದಾಗಿ ” ಚುನಾವಣಾ ಅಧಿಕಾರಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಚುನಾವಣಾ ಅಧಿಕಾರಿ ಅನಿಲ್ ಮಸಿಹ್ ಅವರು ಚುನಾವಣೆಯಲ್ಲಿ ಅವ್ಯವಹಾರ ಎಸಗಿದ್ದಾರೆ ಎಂದು ಆರೋಪಿಸಿ ಪರಾಜಿತ ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಫಲಿತಾಂಶವನ್ನೇ ರದ್ದುಗೊಳಿಸಿ, ಮರು ಮತ ಎಣಿಕಿಗೆ ಆದೇಶಿಸಿತ್ತು.
Advertisement