ರಾಮೇಶ್ವರಂ ಕೆಫೆ ಸ್ಫೋಟ: ಸಾಕ್ಷಿಗಳ ಗುರುತು ಬಹಿರಂಗಪಡಿಸದಂತೆ NIA ಎಚ್ಚರಿಕೆ!

ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ಕೇಸರಿ ಭಯೋತ್ಪಾದನೆ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅಜ್ಞಾನಿ ಕಾಂಗ್ರೆಸ್ ನಾಯಕರಿಗೆ ಸಾಕ್ಷಿಯನ್ನು ಪ್ರಶ್ನಿಸುವುದು ಮತ್ತು ಆರೋಪಿಯನ್ನು ಪ್ರಶ್ನಿಸುವ ವ್ಯತ್ಯಾಸ ತಿಳಿದಿಲ್ಲ ಎಂದು ತಿರುಗೇಟು ಕೊಟ್ಟ ಬಿಜೆಪಿ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ

ನವದೆಹಲಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಲಘು ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನ ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಭಯೋತ್ಪಾದನಾ ವಿರೋಧಿ ಫೆಡರಲ್ ತನಿಖಾ ಸಂಸ್ಥೆ ಎನ್‌ಐಎ ಶುಕ್ರವಾರ ಸಾಕ್ಷಿಗಳ ಗುರುತುಗಳನ್ನು ಬಹಿರಂಗಪಡಿಸದಂತೆ ಎಚ್ಚರಿಕೆ ನೀಡಿ ಪ್ರಕಟಣೆ ಹೊರಡಿಸಿದೆ.

ಎನ್‌ಐಎ ಇಂದು ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ, "ಪ್ರಕರಣವು ಭಯೋತ್ಪಾದಕ ಕೃತ್ಯವಾಗಿರುವುದರಿಂದ, ಸಾಕ್ಷಿಗಳ ಗುರುತು ಬಹಿರಂಗವಾದರೆ ಮಾಹಿತಿಯು ತನಿಖೆಗೆ ಅಡ್ಡಿಯಾಗುವುದಲ್ಲದೆ, ವ್ಯಕ್ತಿಗಳಿಗೆ ಸಮನ್ಸ್ ನೀಡುವ ಅಪಾಯವನ್ನು ಉಂಟುಮಾಡಬಹುದು ಎಂದು ಹೇಳಿದೆ.

ಎನ್‌ಐಎ ಅಧಿಕಾರಿಗಳು ಪ್ರಕರಣದಲ್ಲಿ ಸಾಕ್ಷ್ಯ ಮತ್ತು ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ತಲೆಮರೆಸಿಕೊಂಡಿರುವ ಮತ್ತು ಬಂಧಿತ ಆರೋಪಿಗಳ ಕಾಲೇಜು ಮತ್ತು ಶಾಲಾ ದಿನಗಳ ಸ್ನೇಹಿತರು ಸೇರಿದಂತೆ ಎಲ್ಲ ಪರಿಚಯಸ್ಥರನ್ನು ಕರೆಸಿ ವಿಚಾರಣೆ ನಡೆಸುತ್ತಿದೆ.

ಎನ್‌ಐಎ ಹೇಳಿಕೆಯು ವ್ಯಕ್ತಿಯ ವಿವರಗಳನ್ನು ನೇರವಾಗಿ ನಿರಾಕರಿಸದಿದ್ದರೂ, ಆ ವ್ಯಕ್ತಿ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾನೆ ಮತ್ತು ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ, ಆದರೆ ಬಂಧಿಸಲಾಗಿಲ್ಲ ಎಂದು ಹೇಳುತ್ತದೆ. ಪ್ರಕರಣದ ಆರೋಪಿಯೊಬ್ಬ ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತ ನಡೆಸುತ್ತಿದ್ದ ಅಂಗಡಿಯಿಂದ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸಿದ್ದ ಎನ್ನಲಾಗಿದೆ.

ಮಾರ್ಚ್ 26 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಪ್ರಮುಖ ಆರೋಪಿ ಮುಝಮ್ಮಿಲ್ ಶರೀಫ್ ನನ್ನು ಎನ್ಐಎ ಬಂಧಿಸಿತ್ತು. ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶ ಮೂರು ರಾಜ್ಯಗಳ ಅನೇಕ ಸ್ಥಳಗಳಲ್ಲಿ ಬೃಹತ್ ದಾಳಿಯ ನಂತರ ಈ ಬಂಧನ ನಡೆದಿದೆ. ಮುಝಮ್ಮಿಲ್ ಷರೀಫ್ ಇತರ ಇಬ್ಬರು ಆರೋಪಿಗಳಿಗೆ ಬೆಂಬಲ ನೀಡಿದ್ದ ಎಂದು ಹೇಳಲಾಗಿದೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನನ್ನು ಎನ್‌ಐಎ ವಶಕ್ಕೆ ಪಡೆದಿದೆ ಎಂದು ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಆರೋಪಿಸಿದ್ದಾರೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ವಶಕ್ಕೆ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಸ್ಫೋಟಕ್ಕೆ ನಮ್ಮ ಸರ್ಕಾರವೇ ಕಾರಣ ಎಂದ ರಾಜ್ಯದ ಕೇಸರಿ ಪಡೆ ನಾಯಕರು ಆರೋಪಿಸುತ್ತಿದ್ದರು. ಈಗ ಬಿಜೆಪಿ ಮುಖಂಡನನ್ನು ಎನ್‌ಐಎ ವಶಕ್ಕೆ ಪಡೆದಿರುವುದರಿಂದ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಭಾಗಿಯಾಗಿದೆ ಎಂದರ್ಥವಲ್ಲವೇ? ಧಾರ್ಮಿಕ ರಕ್ಷಣೆಯ ಹೆಸರಿನಲ್ಲಿ ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ಕೇಸರಿ ಭಯೋತ್ಪಾದನೆ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ದೇಶದ ಮೇಲೆ ಹೇರುತ್ತಿರುವ ಕೇಂದ್ರ ಬಿಜೆಪಿ ಇದಕ್ಕೆ ಏನು ಹೇಳುತ್ತದೆ ಎಂದು ಟೀಕಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕ, ಕಾಂಗ್ರೆಸ್ ತಮ್ಮ ಸಹೋದರರನ್ನು ರಕ್ಷಿಸುವ ಸಲುವಾಗಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಅಜ್ಞಾನಿ ಕಾಂಗ್ರೆಸ್ ನಾಯಕರಿಗೆ ಸಾಕ್ಷಿಯನ್ನು ಪ್ರಶ್ನಿಸುವುದು ಮತ್ತು ಆರೋಪಿಯನ್ನು ಪ್ರಶ್ನಿಸುವ ವ್ಯತ್ಯಾಸ ತಿಳಿದಿಲ್ಲ” ಎಂದು ಪೋಸ್ಟ್ ಮಾಡಿದೆ.

ಮಾರ್ಚ್ 13 ರಂದು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಉಸ್ತುವಾರಿ ವಹಿಸಿದ್ದ ಎನ್‌ಐಎ, ಸ್ಫೋಟದ ಪ್ರಮುಖ ಮಾಸ್ಟರ್‌ಮೈಂಡ್ ಎಂದು ನಂಬಲಾದ ಮುಝಮ್ಮಿಲ್ ಶರೀಫ್‌ನನ್ನು ಈ ಹಿಂದೆ ಬಂಧಿಸಿತ್ತು. ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ನಡೆದ ದಾಳಿಗಳ ನಂತರ ಷರೀಫ್ ಬಂಧನವಾಗಿದೆ.

ಪ್ರಮುಖ ಶಂಕಿತ ಮುಸ್ಸಾವಿರ್ ಶಜೀಬ್ ಹುಸೇನ್ ಮತ್ತು ಸಹ ಸಂಚುಕೋರ ಅಬ್ದುಲ್ ಮಥೀನ್ ತಾಹಾನನ್ನು ಬಂಧಿಸಬೇಕಾಗಿದೆ. ಸ್ಫೋಟಕ್ಕೆ ಕಾರಣರಾದವರ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿತ್ತು.

ಕಳೆದ ಮಾರ್ಚ್ 1 ರಂದು ಬೆಂಗಳೂರಿನ ಬ್ರೂಕ್‌ಫೀಲ್ಡ್ ಪ್ರದೇಶದ ಐಟಿಪಿಎಲ್ ರಸ್ತೆಯಲ್ಲಿರುವ ಉಪಾಹಾರ ಗೃಹದಲ್ಲಿ ಲಘು ಪ್ರಮಾಣದ ಬಾಂಬ್ ಸ್ಫೋಟಗೊಂಡಿದ್ದು, ಕೆಲವು ಗ್ರಾಹಕರು ಮತ್ತು ಸಿಬ್ಬಂದಿಗೆ ಗಾಯವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com