ನವದೆಹಲಿ: ಕಳುವಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿಯ ಕಾರನ್ನು ದೆಹಲಿ ಪೊಲೀಸರು ಉತ್ತರ ಪ್ರದೇಶದ ವಾರಣಾಸಿಯಿಂದ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಫಾರ್ಚೂನರ್ ಕಾರು ಮಾರ್ಚ್ 19 ರಂದು ದೆಹಲಿಯ ಗೋವಿಂದಪುರಿ ಪ್ರದೇಶದಿಂದ ಕಳುವಾಗಿತ್ತುಎಂದು ವರದಿಯಾಗಿತ್ತು.
ಬಿಳಿ ಬಣ್ಣದ ಫಾರ್ಚುನರ್ ಎಸ್ ಯುವಿಯನ್ನು ಸರ್ವೀಸ್ ಸೆಂಟರ್ ಗೆ ಬಿಟ್ಟು,ತನ್ನ ನಿವಾಸದಲ್ಲಿ ಊಟ ಮಾಡಲು ಹೋಗಿದ್ದ ವೇಳೆ ಕಳ್ಳತನವಾಗಿದೆ ಎಂದು ಕಾರು ಚಾಲಕ ಜೋಗಿಂದರ್ ಸಿಂಗ್ ಅವರು ದೂರು ನೀಡಿದ್ದರು. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರು ಪತ್ತೆಗೆ ತನಿಖೆ ಆರಂಭಿಸಿದರು.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಎಸ್ ಯುವಿ ಕಾರು ಕೊನೆಯದಾಗಿ ಗುರುಗ್ರಾಮ್ ಕಡೆಗೆ ಹೋಗುತ್ತಿರುವುದು ಕಂಡುಬಂದಿತ್ತು. ಹಿಮಾಚಲ ಪ್ರದೇಶದ ನಂಬರ್ ಪ್ಲೇಟ್ ಹೊಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದೇವೆ. ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಬೇಡಿಕೆಯ ಮೇರೆಗೆ ಕಾರನ್ನು ಕದ್ದಿದ್ದು, ಅದನ್ನು ನಾಗಾಲ್ಯಾಂಡ್‌ಗೆ ಕೊಂಡೊಯ್ಯಲು ಯೋಜಿಸಿದ್ದಾಗಿ ಒಪ್ಪಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
Advertisement