ಇನ್ನು ಕೆಲವೇ ಕ್ಷಣದಲ್ಲಿ ಬಿಜೆಪಿ ಪ್ರಣಾಳಿಕೆ: ಇಂದು ದೆಹಲಿಯಲ್ಲಿ 'ಸಂಕಲ್ಪ ಪತ್ರ' ಪ್ರಧಾನಿ ಮೋದಿಯಿಂದ ಬಿಡುಗಡೆ

ಇಡೀ ದೇಶದ ರಾಜಕೀಯ ಪಕ್ಷಗಳ ಕಣ್ಣು ಇಂದು ಭಾನುವಾರ ದೆಹಲಿಯಲ್ಲಿ ಬಿಡುಗಡೆಯಾಗಲಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಚುನಾವಣಾ ಪ್ರಣಾಳಿಕೆ ಮೇಲೆ ನೆಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಇಡೀ ದೇಶದ ರಾಜಕೀಯ ಪಕ್ಷಗಳ ಕಣ್ಣು ಇಂದು ಭಾನುವಾರ ದೆಹಲಿಯಲ್ಲಿ ಬಿಡುಗಡೆಯಾಗಲಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಚುನಾವಣಾ ಪ್ರಣಾಳಿಕೆ ಮೇಲೆ ನೆಟ್ಟಿದೆ.

ಇನ್ನು ಕೆಲವೇ ಕ್ಷಣಗಳಲ್ಲಿ ಬಿಜೆಪಿಯ ಲೋಕಸಭೆ ಚುನಾವಣೆ 2024ಕ್ಕೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡುತ್ತಿದ್ದಾರೆ. ಬಿಜೆಪಿಯ ಪ್ರಮುಖ ಕೇಂದ್ರ ನಾಯಕರು ಉಪಸ್ಥಿತರಿರುತ್ತಾರೆ. ಮುಂಬರುವ ಲೋಕಸಭೆ ಚುನಾವಣೆ 2024 ಗಾಗಿ ತನ್ನ 'ಸಂಕಲ್ಪ ಪತ್ರ'ವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಲಿದ್ದಾರೆ.

ಪಕ್ಷದ ಪ್ರಣಾಳಿಕೆಯು 'ಒಂದು ರಾಷ್ಟ್ರ, ಒಂದು ಚುನಾವಣೆ' ಮತ್ತು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಸ್ಥಾನಮಾನದ ಮಹತ್ವಾಕಾಂಕ್ಷೆಯ ಗುರಿ ಸೇರಿದಂತೆ ಮಹತ್ವದ ಭರವಸೆಗಳನ್ನು ಉಲ್ಲೇಖಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಕಲ್ಯಾಣ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿ, ಬಿಜೆಪಿಯ ಪ್ರಣಾಳಿಕೆಯು 'ವಿಕಸಿತ ಭಾರತ' (ಅಭಿವೃದ್ಧಿ ಹೊಂದಿದ ಭಾರತ) ಗಾಗಿ ಅದರ ದೃಷ್ಟಿಕೋನವನ್ನು ರೂಪಿಸಲು ನಿರೀಕ್ಷಿಸಲಾಗಿದೆ, ಇದು ಅದರ ಚುನಾವಣಾ ಕಾರ್ಯಸೂಚಿಯ ಕೇಂದ್ರ ವಿಷಯವಾಗಿದೆ.

ಬಿಜೆಪಿ ಸರ್ಕಾರವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು 370 ನೇ ವಿಧಿ ರದ್ದತಿಯಂತಹ ಅನೇಕ ಪ್ರಮುಖ ಸೈದ್ಧಾಂತಿಕ ಭರವಸೆಗಳನ್ನು ಈಗಾಗಲೇ ಈಡೇರಿಸಿರುವುದರಿಂದ, ಪಕ್ಷದ ವಿಶಾಲ ಸಾಂಸ್ಕೃತಿಕ ಮತ್ತು ಹಿಂದುತ್ವದ ಅಜೆಂಡಾವು ಪ್ರಣಾಳಿಕೆಯಲ್ಲಿ ಹೇಗೆ ಪ್ರತಿಫಲಿಸುತ್ತದೆ ಎಂಬುದರ ಬಗ್ಗೆ ಕುತೂಹಲವಿದೆ.

ಪಿಟಿಐ ಸುದ್ದಿಸಂಸ್ಥೆ ಉಲ್ಲೇಖಿಸಿರುವ ಪ್ರಕಾರ, ಪ್ರಣಾಳಿಕೆಯು ಯುವಕರು, ಮಹಿಳೆಯರು, ರೈತರು ಮತ್ತು ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಪ್ರಸ್ತಾಪಿಸುತ್ತದೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ಮೋದಿಯವರು ಆಗಾಗ್ಗೆ ಉಲ್ಲೇಖಿಸುವ ಈ ನಾಲ್ಕು ಗುಂಪುಗಳು ಬಿಜೆಪಿಯ ಚುನಾವಣಾ ಭರವಸೆಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಕಳೆದ ತಿಂಗಳು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು 2024ರ ಲೋಕಸಭೆ ಚುನಾವಣೆಗೆ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ನೇಮಕ ಮಾಡಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಿತಿಯ ನೇತೃತ್ವ ವಹಿಸಿದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದ್ದು, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸಹ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.

ಸಮಿತಿಯು ಸದಸ್ಯರಾದ ಭೂಪೇಂದರ್ ಯಾದವ್, ಅರ್ಜುನ್ ರಾಮ್ ಮೇಘವಾಲ್, ಕಿರಣ್ ರಿಜಿಜು, ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್, ಭೂಪೇಂದರ್ ಪಟೇಲ್, ಹಿಮಂತ ಬಿಸ್ವಾ ಶರ್ಮಾ, ವಿಷ್ಣು ದೇವ್ ಸಾಯಿ, ಮೋಹನ್ ಯಾದವ್, ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೆ, ಸ್ಮೃತಿ ಇರಾನಿ, ಜುಯಲ್ ಇರಾನಿ ಅವರನ್ನು ಒಳಗೊಂಡಿತ್ತು. ರವಿಶಂಕರ್ ಪ್ರಸಾದ್, ಸುಶೀಲ್ ಮೋದಿ, ಕೇಶವ್ ಪ್ರಸಾದ್ ಮೌರ್ಯ, ರಾಜೀವ್ ಚಂದ್ರಶೇಖರ್, ವಿನೋದ್ ತಾವ್ಡೆ, ರಾಧಾ ಮೋಹನ್ ದಾಸ್ ಅಗರ್ವಾಲ್, ಮಂಜಿಂದರ್ ಸಿಂಗ್ ಸಿರ್ಸಾ, ಓ.ಪಿ. ಧಂಕರ್, ಅನಿಲ್ ಆಂಟೋನಿ ಮತ್ತು ತಾರಿಕ್ ಮನ್ಸೂರ್ ಒಳಗೊಂಡಿದ್ದಾರೆ.

ಸಾರ್ವಜನಿಕರಿಂದ ಸಲಹೆಗಳನ್ನು ಸಂಗ್ರಹಿಸಲು ಪಕ್ಷವು ದೇಶಾದ್ಯಂತ ವ್ಯಾನ್‌ಗಳನ್ನು ಕಳುಹಿಸುವುದು ಮತ್ತು ಸಾಮಾಜಿಕ ಮಾಧ್ಯಮ ಪ್ರಚಾರಗಳನ್ನು ಪ್ರಾರಂಭಿಸುವುದು ಸೇರಿದಂತೆ ವ್ಯಾಪಕವಾದ ಕಸರತ್ತುಗಳನ್ನು ನಡೆಸಿದ ನಂತರ ವಿವಿಧ ಪ್ರಸ್ತಾಪಗಳನ್ನು ಚರ್ಚಿಸಲು ಪ್ರಣಾಳಿಕೆ ಸಮಿತಿಯು ಎರಡು ಬಾರಿ ಸಭೆ ಸೇರಿತು.

ಬಿಜೆಪಿಯ ಪ್ರಣಾಳಿಕೆ ಬಿಡುಗಡೆಗೆ ಕಾಂಗ್ರೆಸ್ ಪಕ್ಷದ ಪ್ರತಿಕ್ರಿಯೆಯನ್ನು ಕಾದು ನೋಡಬೇಕಾಗಿದೆ, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ನ 'ನ್ಯಾಯ ಪತ್ರ'ವು "ಮುಸ್ಲಿಂ ಲೀಗ್" ಮುದ್ರೆಯನ್ನು ಹೊಂದಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಹೇಳಿಕೆಗಳ ನಂತರ ಕಾಂಗ್ರೆಸ್ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com