ಮಲಯಾಳಂನ ಹಿರಿಯ ಗಾಯಕ, ಸಂಗೀತ ನಿರ್ದೇಶಕ ಕೆ.ಜಿ.ಜಯನ್ ನಿಧನ

ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಹಾಗೂ ಸಂಗೀತ ನಿರ್ದೇಶಕ ಕೆ ಜಿ ಜಯನ್ ಮಂಗಳವಾರ ಬೆಳಗ್ಗೆ ಕೇರಳದ ತ್ರಿಪುನಿತುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಕೆ ಜಿ ಜಯನ್
ಕೆ ಜಿ ಜಯನ್

ಕೊಚ್ಚಿ: ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಹಾಗೂ ಸಂಗೀತ ನಿರ್ದೇಶಕ ಕೆ ಜಿ ಜಯನ್ ಮಂಗಳವಾರ ಬೆಳಗ್ಗೆ ಕೇರಳದ ತ್ರಿಪುನಿತುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

89 ವರ್ಷವಾಗಿದ್ದ ಜಯನ್ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಶಬರಿಮಲೆ ಅಯ್ಯಪ್ಪನ ಪರಮ ಭಕ್ತರಾಗಿದ್ದ ಜಯನ್ ಅವರು ಅರವತ್ತು ವರ್ಷಗಳ ಹಿಂದೆ ಸಂಗೀತಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅವರ ಸಹೋದರ ವಿಜಯನ್ ಜೊತೆ ಸೇರಿ ಸಂಗೀತ ನಿರ್ದೇಶನ, ಹಾಡುಗಾರಿಕೆ ಮಾಡುತ್ತಿದ್ದರು. ಮಲಯಾಳಂನಲ್ಲಿ ಜಯ-ವಿಜಯನ್ ಜೋಡಿ ಜನಪ್ರಿಯ. ಇಂದಿಗೂ ಶಬರಿಮಲೆಯಲ್ಲಿ ಮುಂಜಾನೆ ಇವರು ಹಾಡಿದ ಹಾಡುಗಳಿಂದಲೇ ದಿನ ಆರಂಭವಾಗುತ್ತದೆ.

ಶಬರಿಮಲೆ ಅಯ್ಯಪ್ಪ ದೇಗುಲವು ಪ್ರತಿದಿನ ಬಾಗಿಲು ತೆರೆದುಕೊಳ್ಳುವುದು 'ಶ್ರೀಕೋವಿಲ್ ನಾದ ತುರನ್ನು..... ಹಾಡಿನ ಮೂಲಕ. ಇದರ ಗಾಯಕರು ಜಯನ್. ಮಾಲಿವುಡ್‌ನ ಪ್ರಮುಖ ಕಲಾವಿದರಲ್ಲಿ ಒಬ್ಬರಾದ ನಟ ಮನೋಜ್ ಕೆ ಜಯನ್ ಅವರ ಕಿರಿಯ ಮಗ.

ಜಯನ್ ಅವರ ಮೃತದೇಹವನ್ನು ತ್ರಿಪುಣಿತುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಇಂದು ಅಪರಾಹ್ನ ಅಂತ್ಯಕ್ರಿಯೆ ನೆರವೇರಲಿದೆ. ಮಲಯಾಳಂ ಚಿತ್ರಗಳಾದ ಧರ್ಮ ಶಾಸ್ತ, ನೀರಕುಡಂ, ಸ್ನೇಹಂ, ತೆರುವುಗೀತಂ ಚಿತ್ರಗಳಿಗೆ ಜಯ-ವಿಜಯ ಸಂಯೋಜಿಸಿದ ಹಾಡುಗಳು ಹೆಚ್ಚು ಮೆಚ್ಚುಗೆ ಗಳಿಸಿದ್ದವು. ಸೋದರರು ತಮಿಳು ಚಿತ್ರಗಳಾದ ಪಾದಪೂಜಾ, ಶಮುಖಪ್ರಿಯ ಮತ್ತು ಪಪ್ಪತಿಗೆ ಹಾಡುಗಳನ್ನು ರಚಿಸಿದ್ದರು.

1988 ರಲ್ಲಿ ಅವರ ಸಹೋದರ ವಿಜಯನ್ ಅವರ ಮರಣದ ನಂತರ, ಜಯನ್ ಭಕ್ತಿಗೀತೆ ರಚನೆ ಮತ್ತು ಸಂಗೀತ ಕಚೇರಿಗಳನ್ನು ನಡೆಸುವ ವೃತ್ತಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು. ಗಾಯಕರಾದ ಕೆ ಜೆ ಯೇಸುದಾಸ್ ಮತ್ತು ಕೆ ಜಯಚಂದ್ರನ್ ಅವರು ಹಾಡಿದ ಮೊದಲ ಅಯ್ಯಪ್ಪ ಭಕ್ತಿಗೀತೆಗಳನ್ನು ಜಯ-ವಿಜಯ ಸಂಯೋಜಿಸಿದ್ದರು.

ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಶಿಷ್ಯರಲ್ಲಿ ಒಬ್ಬರಾದ ಗೋಪಾಲನ್ ತಂತ್ರಿ ಮತ್ತು ನಾರಾಯಣಿ ಅಮ್ಮನವರಿಗೆ ನವೆಂಬರ್ 21, 1934 ರಂದು ಕೊಟ್ಟಾಯಂನ ಕದಂಬೂತ್ರ ಮೇಡಂನಲ್ಲಿ ಜನಿಸಿದ ಜಯನ್ ಅವರು ತಮ್ಮ ಆರನೇ ವಯಸ್ಸಿನಲ್ಲಿ ತಮ್ಮ ಸಹೋದರ ವಿಜಯನ್ ಅವರೊಂದಿಗೆ ಕರ್ನಾಟಕ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಹತ್ತನೇ ವಯಸ್ಸಿನಲ್ಲಿ ಕೊಟ್ಟಾಯಂನ ಕುಮಾರನಲ್ಲೂರು ದೇವಿ ದೇವಸ್ಥಾನದಲ್ಲಿ ಚೊಚ್ಚಲ ಪ್ರದರ್ಶನ ನೀಡಿದ್ದರು.

ಅವರಿಗೆ 2019 ರಲ್ಲಿ ಪದ್ಮಶ್ರೀ ಮತ್ತು 1991 ರಲ್ಲಿ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ನೀರಕುಡಂ ಚಿತ್ರದ ನಕ್ಷತ್ರದೀಪಗಳ ತಿಳಂಗಿ, ತೇರುವು ಗೀತಂನ ಹೃದಯಂ ದೇವಾಲಯಂ ಹಾಡುಗಳು ಜನಪ್ರಿಯವಾಗಿದ್ದವು.

ಜಯನ್ ಅವರ ಪತ್ನಿ ದಿವಂಗತ ವಿ ಕೆ ಸರೋಜಿನಿ ಶಾಲಾ ಶಿಕ್ಷಕಿಯಾಗಿದ್ದರು. ಅವರು ಪುತ್ರರಾದ ಬಿಜು ಕೆ ಜಯನ್, ಮನೋಜ್ ಕೆ ಜಯನ್ ಮತ್ತು ಸೊಸೆಯರಾದ ಪ್ರಿಯಾ ಬಿಜು ಮತ್ತು ಆಶಾ ಮನೋಜ್ ಅವರನ್ನು ಅಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com