ಆದಿತ್ಯ ಠಾಕ್ರೆಯನ್ನು ಸಿಎಂ ಹುದ್ದೆಗೇರಲು ಮಾರ್ಗದರ್ಶನ ನೀಡುವುದಾಗಿ ಫಡ್ನವೀಸ್ ಮಾತು ಕೊಟ್ಟಿದ್ದರು: ಉದ್ಧವ್ ಠಾಕ್ರೆ
ಮುಂಬೈ: ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣದ ನಾಯಕ ಉದ್ಧವ್ ಠಾಕ್ರೆ ಬಿಜೆಪಿ ನಾಯಕ, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಕುರಿತು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. 2019 ರಲ್ಲಿ ದೇವೇಂದ್ರ ಫಡ್ನವಿಸ್ ತಮಗೆ ತಮ್ಮ ಪುತ್ರ ಆದಿತ್ಯ ಠಾಕ್ರೆಯನ್ನು ಮುಖ್ಯಮಂತ್ರಿ ಸ್ಥಾನಕ್ಕೇರುವ ರೀತಿಯಲ್ಲಿ ಬೆಳೆಸುವುದಾಗಿ ಭರವಸೆ ನೀಡಿದ್ದರು, ಇದು ಶಿವಸೇನೆ-ಬಿಜೆಪಿ ನಡುವಿನ ಅಧಿಕಾರ ಹಂಚಿಕೆಗೆ ಸಂಬಂಧಿಸಿದ ಒಪ್ಪಂದದ ಭಾಗವಾಗಿತ್ತು ಎಂದು ಠಾಕ್ರೆ ತಿಳಿಸಿದ್ದಾರೆ.
ಇದಷ್ಟೇ ಅಲ್ಲದೇ ತಾವು ಇನ್ನು 2-3 ವರ್ಷಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗುವುದಾಗಿ ಫಡ್ನವಿಸ್ ಹೇಳಿದ್ದರು ಎಂದು ಠಾಕ್ರೆ ತಿಳಿಸಿದ್ದಾರೆ.
ಧಾರಾವಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ಆಗಿನ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ಶಿವಸೇನೆ (ಅವಿಭಜಿತ) ಜೊತೆ ಮೈತ್ರಿ ಮಾಡಿಕೊಳ್ಳಲು ತಮ್ಮ ನಿವಾಸ 'ಮಾತೋಶ್ರೀ'ಗೆ ಬಂದಿದ್ದರು. "ಆ ಸಮಯದಲ್ಲಿ, ಇಬ್ಬರು ನಾಯಕರು (ಶಾ ಮತ್ತು ಠಾಕ್ರೆ) ಸ್ಥಾನ ಹಂಚಿಕೆ ವಿಧಾನಗಳ ಬಗ್ಗೆ ಚರ್ಚಿಸುತ್ತಿರುವಾಗ ಫಡ್ನವೀಸ್ ಅವರನ್ನು ದಿವಂಗತ ಬಾಳ್ ಠಾಕ್ರೆ ಅವರ ಕೋಣೆಯ ಹೊರಗೆ ಕುಳಿತುಕೊಳ್ಳುವಂತೆ ಮಾಡಲಾಯಿತು" ಎಂಬುದನ್ನು ಉದ್ಧವ್ ಠಾಕ್ರೆ ನೆನಪಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಸ್ಥಾನವನ್ನು 2.5 ವರ್ಷಗಳವರೆಗೆ (ಬಿಜೆಪಿ ಮತ್ತು ಶಿವಸೇನೆ-ಅವಿಭಜಿತ ನಡುವೆ) ಹಂಚಿಕೊಳ್ಳಲಾಗುವುದು ಎಂದು ನನಗೆ ಅಂದು ಭರವಸೆ ನೀಡಲಾಗಿತ್ತು.
"ನಾನು ಆದಿತ್ಯ ಠಾಕ್ರೆಗೆ 2.5 ವರ್ಷಗಳ ಕಾಲ ಸಿಎಂ ಆಗಿರಲು ಮಾರ್ಗದರ್ಶನ ನೀಡುತ್ತೇನೆ. ನಾವು 2.5 ವರ್ಷಗಳ ನಂತರ ಅವರನ್ನು ಸಿಎಂ ಮಾಡಬಹುದು ಎಂದು ದೇವೇಂದ್ರ ಫಡ್ನವಿಸ್ ನನಗೆ ಹೇಳಿದ್ದರು ಎಂಬುದನ್ನು ಠಾಕ್ರೆ ಈಗ ಬಹಿರಂಗಪಡಿಸಿದ್ದಾರೆ.
ನಿಮ್ಮಂಥಹ ಹಿರಿಯ ನಾಯಕರು ಆದಿತ್ಯ ಸಂಪುಟದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತೀರಿ? ಎಂಬ ನನ್ನ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ಫಡ್ನವೀಸ್ ಇನ್ನೆರಡು ಮೂರು ವರ್ಷಗಳಲ್ಲಿ ರಾಷ್ಟ್ರ ರಾಜಕಾರಣಕ್ಕೆ ತೆರಳುವುದಾಗಿ ಫಡ್ನವೀಸ್ ಹೇಳಿದ್ದರು ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಈ ಹೇಳಿಕೆ ಸಂಚಲನ ಮೂಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ