
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾರಾದರೂ ನಿಂದಿಸಿದರೆ ಅವರು ಮರಳಿ ಮನೆ ತಲುಪಲು ಬಿಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕರಿಗೆ ಕೇಂದ್ರ ಸಚಿವ ನಾರಾಯಣ ರಾಣೆ ಅವರು ಮಂಗಳವಾರ ಬೆದರಿಕೆ ಹಾಕಿದ್ದಾರೆ.
ಮಹಾರಾಷ್ಟ್ರದ ಕರಾವಳಿಯ ರತ್ನಗಿರಿ-ಸಿಂಧುದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ರಾಣೆ ಅವರು ಸಿಂಧುದುರ್ಗ ಜಿಲ್ಲೆಯಲ್ಲಿ ಸೋಮವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.
ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಅವರ ಪಕ್ಷದ ಸಂಸದ ಸಂಜಯ್ ರಾವತ್ ಅವರು ಏನು ಮಾತನಾಡುತ್ತಿದ್ದಾರೆಂದು ಅರ್ಥವಾಗದೆ ಮೋದಿಯನ್ನು ಟೀಕಿಸುತ್ತಾರೆ ಎಂದು ಶಿವಸೇನೆ ಮಾಜಿ ನಾಯಕರಾದ ರಾಣೆ ವಾಗ್ದಾಳಿ ನಡೆಸಿದರು.
"ವಿರೋಧ ಪಕ್ಷಗಳು ಶೀಘ್ರದಲ್ಲೇ ಸಿಂಧುದುರ್ಗದಲ್ಲಿ ರ್ಯಾಲಿ ನಡೆಸಲಿವೆ ಎಂದು ನನಗೆ ತಿಳಿದಿದೆ. ರ್ಯಾಲಿ ನಡೆಸಲಿ ಅದು ಪ್ರಜಾಪ್ರಭುತ್ವದ ಭಾಗವಾಗಿದೆ. ಆದರೆ ನಮ್ಮ ನಾಯಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರಾದರೂ ಕೆಟ್ಟ ಭಾಷೆ ಬಳಸಿದರೆ, ಆ ವ್ಯಕ್ತಿಯನ್ನು ನಾವು ಇಲ್ಲಿಂದ ಮನೆಗೆ ಹೋಗಲು ಬಿಡುವುದಿಲ್ಲ" ಎಂದು ರಾಣೆ ಎಚ್ಚರಿಕೆ ನೀಡಿದರು.
2005 ರಲ್ಲಿ ಉದ್ಧವ್ ಠಾಕ್ರೆ ಅವರೊಂದಿಗೆ ಮುನಿಸಿಕೊಂಡ ನಂತರ ಶಿವಸೇನೆ ತೊರೆದ ಬಿಜೆಪಿ ನಾಯಕ ರಾಣೆ, ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಗೆ ಉದ್ಧವ್ ಠಾಕ್ರೆ ಅವರನ್ನು ಅವರ ತಂದೆ ಬಾಳ್ ಠಾಕ್ರೆ ಆಯ್ಕೆ ಮಾಡುತ್ತಿರಲಿಲ್ಲ ಎಂದರು.
Advertisement