
ಶ್ರೀನಗರ: ಈ ವರ್ಷದ ಮೊದಲ ಕೆಲವು ತಿಂಗಳ ಶಾಂತಿಯುತವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ತಿಂಗಳು ಉಗ್ರರ ಹಿಂಸಾಚಾರ ಹಠಾತ್ ಉಲ್ಬಣಗೊಂಡಿದ್ದು, ಜುಲೈ ತಿಂಗಳಲ್ಲಿ ಒಟ್ಟು ಎಂಟು ಎನ್‌ಕೌಂಟರ್‌ಗಳು ನಡೆದಿವೆ.
ಕಳೆದ ತಿಂಗಳು ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳದಲ್ಲಿ ಸುಮಾರು 14 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಮತ್ತು 13 ಉಗ್ರರು ಹತರಾಗಿದ್ದಾರೆ.
ಜುಲೈನಲ್ಲಿ ಕಾಶ್ಮೀರ ಮತ್ತು ಜಮ್ಮುವಿನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ. ಜುಲೈ ತಿಂಗಳಲ್ಲಿ ಎಂಟು ಗುಂಡಿನ ಚಕಮಕಿಗಳು ನಡೆದಿವೆ. ಮೂರು ಗುಂಡಿನ ಚಕಮಕಿಗಳು ಕಣಿವೆಯಲ್ಲಿ ನಡೆದಿದ್ದರೆ, ನಾಲ್ಕು ಎನ್‌ಕೌಂಟರ್‌ಗಳು ಜಮ್ಮು ಪ್ರದೇಶದಲ್ಲಿ ನಡೆದಿವೆ. ಅವುಗಳಲ್ಲಿ ಮೂರು ಪರ್ವತ ಪ್ರದೇಶವಾದ ದೋಡಾ ಜಿಲ್ಲೆಯಲ್ಲಿ ನಡೆದಿವೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಅಂಕಿಅಂಶಗಳ ಪ್ರಕಾರ, ದೋಡಾ ಅರಣ್ಯ ಪ್ರದೇಶದಲ್ಲಿ ಸರಣಿ ಗುಂಡಿನ ಚಕಮಕಿಗಳ ನಂತರ, ಭದ್ರತಾ ಪಡೆಗಳು, 2-3 ಗುಂಪುಗಳಾಗಿ ವಿಭಜಿಸಲ್ಪಟ್ಟ 10-12 ಉಗ್ರರ ಗುಂಪನ್ನು ಪತ್ತೆಹಚ್ಚಲು ದಟ್ಟ ಅರಣ್ಯ ಪ್ರದೇಶದಲ್ಲಿ ಬೃಹತ್ ಕೂಂಬಿಂಗ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ಜುಲೈ ತಿಂಗಳಲ್ಲಿ, ಮೂರು ಪ್ರಮುಖ ದಾಳಿಗಳು ನಡೆದವು - ಒಂದು ಕಥುವಾ ಜಿಲ್ಲೆಯ ಮಾದೇಶಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಅಲ್ಲಿ ಐದು ಸೈನಿಕರು ಸಾವನ್ನಪ್ಪಿದರು.
ದೂರದ ರಜೌರಿ ಗ್ರಾಮದಲ್ಲಿರುವ ಶೌರ ಚಕ್ರ ಪುರಸ್ಕೃತ ವಿಡಿಸಿ ಸದಸ್ಯ ಪುರಷೋತ್ತಮ್ ಕುಮಾರ್ ಅವರ ಮನೆಯ ಮೇಲೆ ಮತ್ತೊಂದು ಉಗ್ರ ದಾಳಿ ನಡೆದಿದೆ. ಈ ಉಗ್ರರ ದಾಳಿಯಲ್ಲಿ ಯೋಧ ಮತ್ತು ಗ್ರಾ.ಪಂ ಸದಸ್ಯನ ಸಂಬಂಧಿ ಗಾಯಗೊಂಡಿದ್ದು, ಉಗ್ರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Advertisement