
ಪಾಟ್ನಾ: ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯಗಳಿಗೆ ಅವಕಾಶ ನೀಡುವ ಸುಪ್ರೀಂ ಕೋರ್ಟ್ ತೀರ್ಪನ್ನು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಶನಿವಾರ ವಿರೋಧಿಸಿದ್ದು, ಅದರ ವಿರುದ್ಧ ಲೋಕ ಜನಶಕ್ತಿ ಪಾರ್ಟಿ(ರಾಮ್ ವಿಲಾಸ್ ) ಮೇಲ್ಮನವಿ ಸಲ್ಲಿಸಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಾಸ್ವಾನ್, ಶೇ.15 ರಷ್ಟು ಕೋಟಾದಲ್ಲಿ ಒಳ ಮೀಸಲಾತಿ ಕಲ್ಪಿಸುವ ಇತ್ತೀಚಿನ ತೀರ್ಪನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದರು. ಪರಿಶಿಷ್ಟ ಜಾತಿ ಕೋಟಾದಲ್ಲಿ ಕೆನೆ ಪದರಕ್ಕೆ ಅವಕಾಶ ನೀಡಿಲ್ಲ. ಒಳ ಮೀಸಲಾತಿಗೆ ಅವಕಾಶ ನೀಡುವುದು ಅಸ್ಪೃಶ್ಯತೆಯಿಂದ ಸಾಮಾಜಿಕವಾಗಿ ಕೊನೆಯ ಅಂಚಿನಲ್ಲಿರುವ ವರ್ಗವನ್ನು ಮೇಲೆತ್ತುವ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ಅವರು ಹೇಳಿದರು.
ಬಹುಪಾಲು ಪರಿಶಿಷ್ಟ ಜಾತಿಯ ಜನರು, ಉತ್ತಮ ಕುಟುಂಬದ ಹಿನ್ನೆಲೆ ಹಾಗೂ ಶಿಕ್ಷಣ ಹೊಂದಿರುವವರು ಸಹ ಅಸ್ಪೃಶ್ಯತೆಯನ್ನು ಎದುರಿಸುತ್ತಾರೆ. ಆದ್ದರಿಂದ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಅವಕಾಶ ನೀಡುವುದು ಸಮರ್ಥನೀಯವಲ್ಲ ಎಂದರು.ಆದಾಗ್ಯೂ, ಈ ವಿಷಯದ ಬಗ್ಗೆ ಜೆಡಿಯು ನಿಲುವಿನ ಬಗ್ಗೆ ಪ್ರತಿಕ್ರಿಯಿಸಲು ಪಾಸ್ವಾನ್ ನಿರಾಕರಿಸಿದರು. ನಿತೀಶ್ ಕುಮಾರ್ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ.
Advertisement