
ನವದೆಹಲಿ: ನೆರೆಯ ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧತೆ ಹಿನ್ನೆಲೆಯಲ್ಲಿ 4,096 ಕಿ.ಮೀ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಹೈ ಅಲರ್ಟ್ ಘೋಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಲ್ಕತ್ತದಲ್ಲಿ ಭದ್ರತಾ ಪರಿಸ್ಥಿತಿ ಪರಾಮರ್ಶೆ ನಡೆಸಿದ ಬಿಎಸ್ಎಫ್ ಮಹಾನಿರ್ದೇಶಕ ದಲ್ಜಿತ್ ಸಿಂಗ್ ಚೌಧರಿ ಮತ್ತು ಇತರ ಹಿರಿಯ ಕಮಾಂಡರ್‌ಗಳು, ಗಡಿಯಲ್ಲಿ ಕೂಡಲೇ ಎಲ್ಲಾ ಸಿಬ್ಬಂದಿ ನಿಯೋಜಿಸುವಂತೆ ಕಮಾಂಡರ್ ಗಳಿಗೆ ನಿರ್ದೇಶಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಪಿಟಿಐಗೆ ತಿಳಿಸಿದ್ದಾರೆ.
ಬಾಂಗ್ಲಾದೇಶ ಬೃಹತ್ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿರುವಂತೆಯೇ ಬಾಂಗ್ಲಾದೇಶದ ಗಡಿಯಲ್ಲಿ ನಿಯೋಜಿಸಲಾದ ಎಲ್ಲಾ ಸಿಬ್ಬಂದಿಗಳ ರಜೆಯನ್ನು ಕೆಲವು ದಿನಗಳಿಂದ ರದ್ದುಗೊಳಿಸಲಾಗಿದೆ. ಎಚ್ಚರಿಕೆಯಿಂದ ಇರುವಂತೆ ಸೇನೆಯ ಎಲ್ಲಾ ಘಟಕಗಳಿಗೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಾಂಗ್ಲಾದೇಶ ಗಡಿ ಹಂಚಿಕೊಂಡಿರುವ ಭಾರತದ ಐದು ಜಿಲ್ಲೆಗಳಲ್ಲಿ ಭದ್ರತೆ ನೀಡುವಲ್ಲಿ ಬಿಎಸ್ ಎಫ್ ಯೋಧರು ಮುಂಚೂಣಿಯಲ್ಲಿದ್ದಾರೆ. ಪಶ್ಚಿಮ ಬಂಗಾಳ ಬಾಂಗ್ಲಾದೇಶದೊಂದಿಗೆ ಒಟ್ಟು 2,217 ಕಿ.ಮೀ, ತ್ರಿಪುರಾದೊಂದಿಗೆ 856 ಕಿ.ಮೀ, ಮೇಘಾಲಯ 443 ಕಿ.ಮೀ, ಅಸ್ಸಾಂ 262 ಕಿಮೀ ಮತ್ತು ಮಿಜೋರಾಂ 318 ಕಿಮೀ ಗಡಿಯನ್ನು ಹಂಚಿಕೊಂಡಿವೆ.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸೋಮವಾರ ರಾಜೀನಾಮೆ ನೀಡಿ ದೇಶವನ್ನು ತೊರೆದಿದ್ದು, ತ್ರಿಪುರಾದ ಅಗರ್ತಲಾಕ್ಕೆ ಆಗಮಿಸಿದ್ದಾರೆ ಎಂಬಂತಹ ವರದಿಗಳು ಕೇಳಿಬರುತ್ತಿವೆ. ಆದರೆ, ಅವುಗಳು ಇನ್ನೂ ದೃಢಪಟ್ಟಿಲ್ಲ.
Advertisement