ಚಂಡೀಗಢ: 50 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುನ್ನವೇ ಅಧಿಕ ತೂಕ ಹೊಂದಿದ್ದಕ್ಕಾಗಿ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿರುವ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಹರಿಯಾಣ ಸರ್ಕಾರವು ಪದಕ ವಿಜೇತರಂತೆ ಸನ್ಮಾನಿಸಲಿದೆ ಎಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಗುರುವಾರ ಹೇಳಿದ್ದಾರೆ.
ಒಲಿಂಪಿಕ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತರಿಗೆ ರಾಜ್ಯ ಸರ್ಕಾರ ನೀಡುವ ಅದೇ ಬಹುಮಾನವನ್ನು ಅವರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಫೋಗಟ್ ಅವರು ತನ್ನ ಅಂತಾರಾಷ್ಟ್ರೀಯ ಕುಸ್ತಿ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ, ಇನ್ನು ಆಟದಲ್ಲಿ ಮುಂದುವರೆಯಲು ತನಗೆ ಶಕ್ತಿ ಇಲ್ಲ ಎಂದು ಹೇಳಿದರು.
ಸಾಮಾಜಿಕ ಮಾಧ್ಯಮದಲ್ಲಿ ತನ್ನ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ 29 ವರ್ಷ ವಯಸ್ಸಿನ ಫೋಗಟ್ ಚಿನ್ನದ ಪದಕದ ಪಂದ್ಯವಾದ ಫೈನಲ್ ಗೆ ಮುಂಚಿತವಾಗಿ 100 ಗ್ರಾಂ ಅಧಿಕ ತೂಕ ಕಂಡುಬಂದ ಹಿನ್ನೆಲೆಯಲ್ಲಿ ತನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರನ್ನು ಕ್ಷಮೆಯನ್ನು ಕೋರಿದರು.
ವಿನೇಶ್ ಫೋಗಟ್ ಅವರನ್ನು ಪದಕ ವಿಜೇತರಂತೆ ಸ್ವಾಗತಿಸಲು ಮತ್ತು ಗೌರವಿಸಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದರು.
ಒಲಂಪಿಕ್ ಬೆಳ್ಳಿ ಪದಕ ವಿಜೇತರಿಗೆ ಹರಿಯಾಣ ಸರ್ಕಾರ ನೀಡುವ ಎಲ್ಲಾ ಗೌರವ, ಬಹುಮಾನ ಮತ್ತು ಸೌಲಭ್ಯಗಳನ್ನು ವಿನೇಶ್ ಫೋಗಟ್‌ಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ತನ್ನ ಕ್ರೀಡಾ ನೀತಿಯ ಪ್ರಕಾರ, ಹರಿಯಾಣ ಸರ್ಕಾರವು ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂಪಾಯಿ ನಗದು, ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ಮತ್ತು ಕಂಚಿನ ಪದಕ ವಿಜೇತರಿಗೆ 2.5 ಕೋಟಿ ರೂಪಾಯಿ ನೀಡುತ್ತದೆ.
ಫೋಗಟ್ ಅವರು 50 ಕೆಜಿ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎನಿಸುವ ಮೂಲಕ ಇತಿಹಾಸ ಬರೆದಿದ್ದಾರೆ.
Advertisement