ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಎಎಪಿಯ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರು 17 ತಿಂಗಳ ನಂತರ ಶುಕ್ರವಾರ ತಿಹಾರ್ ಜೈಲಿನಿಂದ ಬಿಡುಗಡೆಯಾದರು.
ಜೈಲಿನಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮನೀಶ್ ಸಿಸೋಡಿಯಾ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಶಕ್ತಿಯಿಂದಾಗಿ ನನಗೆ ಜಾಮೀನು ಸಿಕ್ಕಿದೆ ಮತ್ತು ಅದೇ ಶಕ್ತಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಿಡುಗಡೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಉಪಮುಖ್ಯಮಂತ್ರಿಗೆ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ನೀಡಿದ್ದು, ವಿಚಾರಣೆಯಿಲ್ಲದೆ ಅವರ ದೀರ್ಘಾವಧಿಯ ಸೆರೆವಾಸವು ತ್ವರಿತ ನ್ಯಾಯದ ಹಕ್ಕನ್ನು ಕಸಿದುಕೊಂಡಿದೆ ಎಂದು ಹೇಳಿತ್ತು.
ಎಎಪಿಯ ರಾಷ್ಟ್ರೀಯ ಸಂಚಾಲಕರಾಗಿರುವ ಕೇಜ್ರಿವಾಲ್ ಕೂಡ ಇದೇ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದಾರೆ.
ಇಂದು ಸಂಜೆ ಸಿಸೋಡಿಯಾ ಜೈಲಿನಿಂದ ಹೊರಬರುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು.
17 ತಿಂಗಳಿನಿಂದ ಬಂಧನದಲ್ಲಿರುವುದನ್ನು ಗಮನಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. "ನಾವು ಈ ಕಾನೂನು ಹೋರಾಟವನ್ನು ಸಂವಿಧಾನದ ಮೂಲಕ ತಾರ್ಕಿಕ ಅಂತ್ಯಕ್ಕೆ ತಂದಿದ್ದೇವೆ. ನನ್ನೊಂದಿಗಿದ್ದ ಎಲ್ಲರಿಗೂ ಧನ್ಯವಾದಗಳು" ಎಂದು ಸಿಸೋಡಿಯಾ ಹೇಳಿದರು.
ಕಳೆದ 17 ತಿಂಗಳುಗಳಲ್ಲಿ ನನ್ನ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ನಾನು ಮಾತ್ರವಲ್ಲದೆ ದೆಹಲಿಯ ಪ್ರತಿಯೊಬ್ಬ ವ್ಯಕ್ತಿ ಮತ್ತು ದೇಶದ ಮಕ್ಕಳು ನನ್ನೊಂದಿಗೆ ಭಾವನಾತ್ಮಕವಾಗಿ ಜೈಲಿನಲ್ಲಿ ಇದ್ದರು. ಸಂವಿಧಾನದ ಶಕ್ತಿಯನ್ನು ಬಳಸಿಕೊಂಡು ದೇಶದಲ್ಲಿನ ಸರ್ವಾಧಿಕಾರಕ್ಕೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳುತ್ತೇನೆ ಎಂದರು.
ಇದೇ ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಶ್ಲಾಘಿಸಿದ ಸಿಸೋಡಿಯಾ, ನಾನು ಸಂವಿಧಾನ ಶಿಲ್ಪಿಗೆ ಋಣಿಯಾಗಿದ್ದೇನೆ. ಅಂಬೇಡ್ಕರ್ ಅವರಿಗೆ ನನ್ನ ಇಡೀ ಜೀವನ ಋಣಿಯಾಗಿದೆ ಎಂದರು. ಇದು ಪ್ರತಿಯೊಬ್ಬರಿಗೂ ಭಾವನಾತ್ಮಕ ಕ್ಷಣವಾಗಿದೆ ಮತ್ತು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಶಕ್ತಿಯು ಕೇಜ್ರಿವಾಲ್ ಬಿಡುಗಡೆಗೆ ದಾರಿ ಮಾಡಿಕೊಡಲಿದೆ ಎಂದು ಆಶಿಸಿದರು.
ಈಗ ರದ್ದಾದ ದೆಹಲಿ ಅಬಕಾರಿ ನೀತಿ 2021-22 ರ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗಾಗಿ ಕಳೆದ ವರ್ಷ ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಬಂಧಿಸಿತ್ತು.
Advertisement