ವಯನಾಡು: ಭೀಕರ ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದು, ಮುಂಡಕೈ-ಚೂರಲ್‌ಮಲಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಕಲ್ಪೆಟ್ಟಾದ ಎಸ್.ಕೆ.ಎಂ.ಜೆ. ಶಾಲಾ ಮೈದಾನದಲ್ಲಿರುವ ಹೆಲಿಪ್ಯಾಡ್‌ಗೆ ಬಂದಿಳಿದ ಪ್ರಧಾನಿ ಮೋದಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಚೂರಲ್‌ಮಲಗೆ ತೆರಳಿದರು. ಭೂಕುಸಿತದಿಂದ ಹಾನಿಗೊಂಡ ಚೂರಲ್‌ಮಲಾ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಗ್ರಾಮಗಳನ್ನು ವೀಕ್ಷಿಸಿದರು.
ಪ್ರಧಾನಿ ಮೋದಿ ಅವರು ಸೇತುವೆಯ ಮೇಲೆ ನಡೆದ ಹೋಗಿ, ಹಾನಿಯ ಸಮೀಕ್ಷೆ ನಡೆಸಿದರು. ಚೂರಲ್‌ಮಲ ತಲುಪಿದ ನಂತರ ತಮ್ಮ ವಾಹನದಿಂದ ಇಳಿದು, ರಕ್ಷಣಾ ಸಿಬ್ಬಂದಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿ ವೇಣು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಬಂಡೆಗಳು ಮತ್ತು ಅವಶೇಷಗಳಿಂದ ಆವೃತವಾದ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ಸಮೀಕ್ಷೆ ಮಾಡಿದರು.
ಪ್ರಧಾನಿಯವರೊಂದಿಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಸಹ ಇದ್ದರು.
ಇದಾದ ಬಳಿಕ ದುರಂತದಲ್ಲಿ ಬದುಕುಳಿದ ಮತ್ತು ಚಿಕಿತ್ಸೆ ಪಡೆಯುತ್ತಿರುವವರನ್ನೂ ಪ್ರಧಾನಿ ಮೋದಿ ಭೇಟಿ ಮಾಡಲಿದರು. ಮೇಪ್ಪಾಡಿ ಆಸ್ಪತ್ರೆಯಲ್ಲಿರುವ ಅರುಣ್, ಅನಿಲ್, ಎಂಟು ವರ್ಷದ ಆವಂತಿಕಾ ಮತ್ತು ಒಡಿಶಾದ ಸುಹೃತಿ ಅವರನ್ನು ಮೋದಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ವಿಪತ್ತು ಪೀಡಿತ ಪ್ರದೇಶದಲ್ಲಿ ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳಿಗಾಗಿ ಕೇರಳ ಸರ್ಕಾರವು ಕೇಂದ್ರದಿಂದ 2,000 ಕೋಟಿ ರೂಪಾಯಿ ನೆರವನ್ನು ಕೋರಿದೆ. ಜುಲೈ 30 ರಂದು ಈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಕನಿಷ್ಠ 500 ಜನರು ಮೃತಪಟ್ಟಿದ್ದಾರೆ.
Advertisement